ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ನಿನ್ನೆಯಿಂದ ಆರಂಭವಾಗಿದೆ. A -1 ಆರೋಪಿ ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲ ಎಸ್. ಬಾಲನ್ ಅವರು ವಾದ ಮಂಡಿಸಿದ್ದಾರೆ. ಟಿವಿ, ರೇಡಿಯೋ, ದಿನಪತ್ರಿಕೆ, ಮ್ಯೂಸಿಕ್, ಮೆಡಿಟೇಷನ್ ಹಾಗೂ ಮನೆ ಊಟ ಬೇಕು ಎಂದು ಪವಿತ್ರಾ ಗೌಡ ಪರವಾಗಿ ವಕೀಲರು ಮನವಿ ಮಾಡಿದ್ದು, ಪವಿತ್ರಾ ಗೌಡ ಇರುವ ಸೆಲ್ಗೆ ಟಿವಿ ಅಳವಡಿಸಲು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಜಡ್ಜ್ ಸೂಚನೆ ನೀಡಿದ್ದಾರೆ.
ಅಲ್ಲದೇ ಆರೋಪಿಗೆ ದಿನಪತ್ರಿಕೆ, ಗ್ರಂಥಾಲಯದ ಪುಸ್ತಕ ಒದಗಿಸಲೂ ಸೂಚಿಸಲಾಗಿದೆ. ಈ ಬಗ್ಗೆ ಜೈಲು ಅಧಿಕಾರಿಗಳಿಗೆ ಮಾಹಿತಿ ರವಾನಿಸಲು ತಮ್ಮ ಕಚೇರಿಗೆ ಕೋರ್ಟ್ ಸೂಚನೆ ಕೊಟ್ಟಿದೆ.
ಜೈಲಿನಲ್ಲಿರುವ ಪವಿತ್ರಾಗೌಡ ತಮ್ಮ ಪರ ವಕೀಲರ ಮೂಲಕ ಕರ್ನಾಟಕ ಕಾರಾಗೃಹ ನಿಯಮಾವಳಿ 749ರ ನಿಯಮ VIರ ಅಡಿಯಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಟಿವಿ ಅಳವಡಿಕೆ, ದಿನಪತ್ರಿಕೆ, ಗ್ರಂಥಾಲಯ ಪುಸ್ತಕಗಳು, ರೇಡಿಯೋ ಮತ್ತು ಸಂಗೀತ ಹಾಗೂ ಧ್ಯಾನಕ್ಕೆ ಅವಕಾಶ ನೀಡಲು ಮನವಿ ಮಾಡಿದ್ದರು. ಎರಡು ಕಡೆ ವಾದ ಆಲಿಸಿದ 57ನೇ ಸೆಷನ್ಸ್ ನ್ಯಾಯಾಲಯವು, ಜೈಲು ನಿಯಮಾವಳಿಗಳ ಅನ್ವಯ ಕೆಲವು ಸವಲತ್ತುಗಳನ್ನು ನೀಡಲು ಒಪ್ಪಿಗೆ ಸೂಚಿಸಿದೆ.
ಇದನ್ನೂ ಓದಿ : ನೆಲಮಂಗಲ ಹೆಡ್ ಕಾನ್ಸ್ಟೇಬಲ್ನಿಂದ 25 ಕೋಟಿ ಮೌಲ್ಯದ ಭೂ ಕಬಳಿಕೆ – HC ಗಿರಿಜೇಶ್ & ಗ್ಯಾಂಗ್ ವಿರುದ್ಧ ಕ್ರಮ ಯಾವಾಗ?







