ಕನ್ನಡ ಚಿತ್ರರಂಗದ ಶೆಟ್ಟಿ ಗ್ಯಾಂಗ್ ಎಂದೇ ಹೆಸರಾಗಿದ್ದ ನಿರ್ದೇಶಕ-ನಟರಾದ ರಿಷಬ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಸ್ನೇಹದಲ್ಲಿ ಬಿರುಕು ಮೂಡಿದೆ. ‘ಕಾಂತಾರ’ದ ಬಳಿಕ ಇಬ್ಬರೂ ದೂರವಾಗಿದ್ದು, ರಿಷಬ್ ಶೆಟ್ಟಿ ಅವರ ಇತ್ತೀಚಿನ ಹೇಳಿಕೆ ಈ ವದಂತಿಗೆ ಪುಷ್ಟಿ ನೀಡಿದೆ.
ಶೆಟ್ಟಿ ಗ್ಯಾಂಗ್ ಎಂದೇ ಹೆಸರಾಗಿದ್ದ ಈ ಗೆಳೆಯರು, ಪರಸ್ಪರರ ಸಿನಿಮಾಗಳ ಪ್ರಚಾರದಿಂದಲೂ ದೂರ ಉಳಿದಿದ್ದಾರೆ. ರಿಷಬ್ ಅವರ ಕಾಂತಾರ 1 ಬಗ್ಗೆ ರಾಜ್ ಬಿ ಶೆಟ್ಟಿ ಯಾವುದೇ ಸಾರ್ವಜನಿಕ ಪ್ರತಿಕ್ರಿಯೆ ನೀಡಿಲ್ಲ.
ಈ ಹಿಂದೆ ಕಾಂತಾರ ಚಿತ್ರದ ಯಶಸ್ಸಿನ ಸಂದರ್ಭದಲ್ಲಿ ರಾಜ್ ಬಿ ಶೆಟ್ಟಿ, ರಿಷಬ್ ಶೆಟ್ಟಿ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದರು. ಕೆಲವು ಮೂಲಗಳ ಪ್ರಕಾರ, ಕಾಂತಾರ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯಗಳ ನಿರ್ದೇಶನದಲ್ಲಿ ರಾಜ್ ಬಿ ಶೆಟ್ಟಿ ಸಹ ಕೈಜೋಡಿಸಿದ್ದರು ಎಂಬ ಮಾತುಗಳಿದ್ದವು. ಕಾಂತಾರ ಚಾಪ್ಟರ್ 1 ನಿಂದ ತಾವು ಹೊರಗುಳಿಯಲು ವೈಯಕ್ತಿಕ ನಂಬಿಕೆ ಮತ್ತು ಧಾರ್ಮಿಕ ವಿಚಾರಗಳು ಕಾರಣ ಎಂದು ರಾಜ್ ಬಿ ಶೆಟ್ಟಿ ಈ ಹಿಂದೆ ಸ್ಪಷ್ಟಪಡಿಸಿದ್ದರು. ಮಂಗಳೂರಿನ ಸ್ಥಳೀಯರಾದ ರಾಜ್ ಅವರಿಗೆ ‘ದೈವ’ದ ಬಗ್ಗೆ ಇರುವ ನಂಬಿಕೆಯಿಂದಾಗಿ, ಕಾಂತಾರ 1 ರಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದರು ಎನ್ನಲಾಗಿದೆ.
ಕಾಂತಾರದವರೆಗೆ ನಗು ನಗುತ್ತಾ ಪರಸ್ಪರ ಬೆಂಬಲಿಸಿಕೊಂಡು ಬಂದಿದ್ದ ಈ ಆತ್ಮೀಯ ಗೆಳೆಯರ ನಡುವೆ ಇಷ್ಟೊಂದು ದೊಡ್ಡ ಕಂದಕ ಸೃಷ್ಟಿಯಾಗಲು ಕಾರಣವೇನು ಎಂಬುದು ಇಲ್ಲಿಯವರೆಗೂ ನಿಗೂಢವಾಗಿದೆ. ಇದು ಸಿನಿಮಾದ ವಿಷಯವೇ, ವೈಯಕ್ತಿಕ ಮನಸ್ತಾಪವೇ, ಅಥವಾ ಯಶಸ್ಸು ತಂದ ಬಿರುಕೇ ಎಂಬ ಕುತೂಹಲ ಎಲ್ಲೆಡೆ ಮನೆ ಮಾಡಿದೆ.

ಕೇವಲ ಸಿನಿಮಾಗಳಲ್ಲದೆ, ತಮ್ಮ ಗಟ್ಟಿ ಸ್ನೇಹದಿಂದಲೂ ಪ್ರಸಿದ್ಧರಾಗಿದ್ದ ಈ ಪ್ರತಿಭಾವಂತರ ನಡುವೆ ಕಾಂತಾರ ಚಾಪ್ಟರ್-1 ನಂತರ ಎಲ್ಲವೂ ಸರಿಯಿಲ್ಲ ಎಂಬ ಮಾತುಗಳು ಹರಿದಾಡುತ್ತಿವೆ. ಇತ್ತೀಚೆಗೆ 45 ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ರಿಷಬ್ ಶೆಟ್ಟಿ ನೀಡಿದ ಪ್ರತಿಕ್ರಿಯೆಯೇ ಈ ವದಂತಿಗಳಿಗೆ ಪುಷ್ಠಿ ನೀಡಿದೆ.
ಟ್ರೈಲರ್ ವೀಕ್ಷಿಸಿದ ಬಳಿಕ ರಿಷಬ್ ಅವರು ವೇದಿಕೆಯ ಮೇಲೆ ಶಿವರಾಜ್ಕುಮಾರ್ ಮತ್ತು ಉಪೇಂದ್ರ ಬಗ್ಗೆ ಮಾತ್ರ ಪ್ರಸ್ತಾಪಿಸಿದರು. ಆದರೆ, ಅದೇ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿರುವ ಆಪ್ತಮಿತ್ರ ರಾಜ್ ಬಿ ಶೆಟ್ಟಿ ಅವರ ಹೆಸರನ್ನು ಅವರು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದು ಎಲ್ಲರ ಹುಬ್ಬೇರಿಸಿದೆ. ಈ ಮೌನವು ಇವರಿಬ್ಬರ ನಡುವಿನ ವೈಮನಸ್ಸನ್ನು ಸಾರ್ವಜನಿಕವಾಗಿ ಬಯಲು ಮಾಡಿದಂತಿದೆ.
ಇದನ್ನೂ ಓದಿ : ಮಸ್ತ್ ಮಲೈಕಾಗೆ ಸಾನ್ವಿ ಸುದೀಪ್ ಧ್ವನಿ – ಮಗಳ ಧ್ವನಿಗೆ ಕಿಚ್ಚನ ಜರ್ಬದಸ್ತ್ ಕುಣಿತ!







