ವಿಮಾನ ನಿಲ್ದಾಣದ ವಿಚಾರವಾಗಿ – ಸದನದಲ್ಲಿ 3 ಸಚಿವರ ನಡುವೆ ಮಾತಿನ ಚಕಮಕಿ!

ಬೆಳಗಾವಿ : ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ, ಏರ್‌ಪೋರ್ಟ್‌ ವಿಚಾರಕ್ಕೆ ಸಚಿವರಾದ ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್ ಮತ್ತು ಈಶ್ವರ್ ಖಂಡ್ರೆ ನಡುವೆ ವಾಗ್ವಾದ ನಡೆಯಿತು. ಇದನ್ನು ವಿಪಕ್ಷಗಳು ಕ್ಯಾಬಿನೆಟ್ ಜಗಳ ಎಂದು ಟೀಕಿಸಿದವು.

ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರ ಪ್ರಶ್ನೆಗೆ ಸಚಿವ ಎಂ.ಬಿ. ಪಾಟೀಲ್ ಉತ್ತರಿಸುವಾಗ ಗೊಂದಲ ಆರಂಭವಾಯಿತು. ಬೆಂಗಳೂರು-ಕಲಬುರಗಿ ವಿಮಾನ ಸಂಚಾರ ರದ್ದತಿಗೆ ಆಕ್ಷೇಪಿಸಿದ ಕಮಕನೂರು, 700 ಎಕರೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರಿಲ್ಲ ಎಂದು ಸೇವೆ ರದ್ದು ಮಾಡುವುದು ಸರಿಯಲ್ಲ, ಕೂಡಲೇ ಸೇವೆ ಪುನರಾರಂಭಿಸಬೇಕು, ಎಂದು ಆಗ್ರಹಿಸಿದರು. ಎಂ.ಬಿ. ಪಾಟೀಲ್, ಕಲಬುರಗಿ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರವೇ ಪೂರ್ಣ ಹಣ ಖರ್ಚು ಮಾಡಿದೆ. ಆದರೆ, ಪ್ರಯಾಣಿಕರ ಕೊರತೆಯಿಂದ ಸ್ಟಾರ್ ಲೈನ್ ಏರ್ ಲೈನ್ಸ್ ಆಗಸ್ಟ್ 15 ರಿಂದ ಸೇವೆ ನಿಲ್ಲಿಸಿದೆ ಎಂದು ಮಾಹಿತಿ ನೀಡಿದರು.

ಇದೇ ವೇಳೆ ಎಂ.ಬಿ. ಪಾಟೀಲ್, ಈ ಏರ್‌ಪೋರ್ಟ್‌ಗಳು ‘ಉಡಾನ್’ ಯೋಜನೆ ಅಡಿಯಲ್ಲಿದ್ದು, 3 ವರ್ಷಗಳ ನಂತರ ಲಾಭ ಸಿಗುವುದಿಲ್ಲ. ದೇಶದ ಅನೇಕ ವಿಮಾನ ನಿಲ್ದಾಣಗಳು ಮುಚ್ಚುವ ಸಾಧ್ಯತೆ ಇರುವುದರಿಂದ, ‘ಉಡಾನ್’ ಯೋಜನೆಯ ಅವಧಿಯನ್ನು 7 ರಿಂದ 10 ವರ್ಷಗಳಿಗೆ ವಿಸ್ತರಿಸಲು ಕೇಂದ್ರಕ್ಕೆ ಮನವಿ ಮಾಡಿದ್ದೇವೆ ಎಂದರು. ಅವರ ಉತ್ತರಕ್ಕೆ ಸಚಿವ ಶಿವಾನಂದ ಪಾಟೀಲ್ ವಿರೋಧಿಸಿ, ಬೀದರ್‌ನಲ್ಲಿ ವಿಮಾನ ಯಾನ ಆರಂಭವಾಗುತ್ತಿದೆ. ನೀವು ‘ಉಡಾನ್’ ಬಗ್ಗೆ ಚರ್ಚಿಸಿದ್ದೀರಾ? ಯಾರೊಂದಿಗೆ ಮಾತನಾಡಿ ವಿಮಾನ ಯಾನ ಆರಂಭಿಸುತ್ತಿದ್ದೀರಿ? ಎಂದು ನೇರವಾಗಿ ಪ್ರಶ್ನಿಸಿದರು.

ಇದೇ ವೇಳೆ ಸಚಿವ ಈಶ್ವರ್ ಖಂಡ್ರೆ ಮಧ್ಯಪ್ರವೇಶಿಸಿ, ನಾವು ಆ ನಿಲ್ದಾಣವನ್ನು ಕಲ್ಯಾಣ ಕರ್ನಾಟಕ ನಿಧಿ ಅಡಿ ನಿರ್ಮಿಸಿದ್ದೇವೆ ಎಂದರು. ಇದರಿಂದ ಖಂಡ್ರೆ ಮತ್ತು ಶಿವಾನಂದ ಪಾಟೀಲ್ ನಡುವೆ ಮಾತಿನ ಚಕಮಕಿ ನಡೆಯಿತು. ಆಡಳಿತ ಪಕ್ಷದವರ ಈ ಗೊಂದಲಕ್ಕೆ ವಿಪಕ್ಷ ಸದಸ್ಯರಾದ ಸಿ.ಟಿ. ರವಿ ಮತ್ತು ಎನ್. ರವಿಕುಮಾರ್ ಇದು ಕ್ಯಾಬಿನೆಟ್ ಜಗಳ ಎಂದು ವ್ಯಂಗ್ಯವಾಡಿದರು. ಅಂತಿಮವಾಗಿ, ಸಭಾಪತಿಗಳ ಪೀಠದಲ್ಲಿದ್ದ ಬಸವರಾಜ ಹೊರಟ್ಟಿ ಅವರು ವಾಗ್ವಾದವನ್ನು ತಣ್ಣಗಾಗಿಸಿದರು.

ಇದನ್ನೂ ಓದಿ : ರಾಜ್ಯದಲ್ಲಿ ಶೀಘ್ರವೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ – ಸಚಿವ ರಹೀಂ ಖಾನ್ ಭರವಸೆ!

Btv Kannada
Author: Btv Kannada

Read More