ಬೆಳಗಾವಿ : 187 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ವಿಧಾನ ಪರಿಷತ್‌ನಲ್ಲಿ ತೀವ್ರ ಚರ್ಚೆ ನಡೆದಿದ್ದು, ಸಚಿವ ರಹೀಂ ಖಾನ್ ಶೀಘ್ರವೇ ಚುನಾವಣೆ ನಡೆಸುವುದಾಗಿ ಭರವಸೆ ನೀಡಿದರು. ಬಿಜೆಪಿ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬವು ಪ್ರಜಾಪ್ರಭುತ್ವ ವಿರೋಧಿ ಎಂದು ಆಕ್ಷೇಪಿಸಿ, ಕೂಡಲೇ ಚುನಾವಣೆ ನಡೆಸಲು ಆಗ್ರಹಿಸಿದರು.
ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಪೌರಾಡಳಿತ ಸಚಿವ ರಹೀಂ ಖಾನ್, ರಾಜ್ಯದ 187 ನಗರ ಸ್ಥಳೀಯ ಸಂಸ್ಥೆಗಳ ಅವಧಿ ಮುಕ್ತಾಯವಾಗಿದೆ. ಕೆಲವು ಸಂಸ್ಥೆಗಳು ಮೇಲ್ದರ್ಜೆಗೆ ಏರಿವೆ. ಸದ್ಯ, ಮೀಸಲಾತಿ ಮತ್ತು ಡಿಲಿಮಿಟೇಷನ್ (ಕ್ಷೇತ್ರ ಪುನರ್ವಿಂಗಡಣೆ) ಪ್ರಕ್ರಿಯೆ ನಡೆಯುತ್ತಿರುವುದರಿಂದ ಚುನಾವಣೆಗೆ ಸ್ವಲ್ಪ ಸಮಯ ಬೇಕಾಗಿದೆ. ಈಗಾಗಲೇ ಚುನಾವಣಾ ಪ್ರಕ್ರಿಯೆಯ ಫೈಲ್ ಸಿದ್ಧವಾಗಿದೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸರ್ಕಾರ ಶೇ. 100ರಷ್ಟು ಸಿದ್ಧವಾಗಿದೆ ಮತ್ತು ಆದಷ್ಟು ಶೀಘ್ರ ಪ್ರಕ್ರಿಯೆ ಮುಗಿಸಿ ಚುನಾವಣೆ ನಡೆಸುವುದಾಗಿ ಅವರು ತಿಳಿಸಿದರು.

ಈ ವೇಳೆ, ರಹೀಂ ಖಾನ್ ಮತ್ತು ಸಚಿವ ಬೈರತಿ ಸುರೇಶ್ ಅವರು ಬಿಜೆಪಿ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ, ಹಿಂದಿನ ಸರ್ಕಾರಗಳು ಕೂಡ ಜಿ.ಪಂ., ತಾ.ಪಂ. ಮತ್ತು ಬಿಬಿಎಂಪಿ ಚುನಾವಣೆಗಳನ್ನು ವಿಳಂಬ ಮಾಡಿದ್ದವು ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಸದಸ್ಯರಾದ ಸಿ.ಟಿ. ರವಿ ಸೇರಿ ಹಲವರು ಆಕ್ಷೇಪ ವ್ಯಕ್ತಪಡಿಸಿ, ಚುನಾವಣೆ ನಡೆಸದೇ ಆರೋಪ ಮಾಡಬೇಡಿ ಎಂದು ಆಕ್ರೋಶ ಹೊರಹಾಕಿದರು.
ನೀವು ಬಂದು ಎರಡೂವರೆ ವರ್ಷವಾದರೂ ಏಕೆ ಚುನಾವಣೆ ಮಾಡಲಿಲ್ಲ?’ ಎಂದು ಬಿಜೆಪಿ ಸದಸ್ಯರು ಪ್ರಶ್ನಿಸಿದಾಗ, ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಕೆಲಕಾಲ ತೀವ್ರ ಮಾತಿನ ಚಕಮಕಿ ನಡೆಯಿತು. ಅಂತಿಮವಾಗಿ, ಸಚಿವ ರಹೀಂ ಖಾನ್, “ನಮ್ಮ ಸರ್ಕಾರಕ್ಕೆ ಚುನಾವಣೆ ನಡೆಸುವ ಇಚ್ಛೆ ಇದೆ. ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆದಷ್ಟು ಶೀಘ್ರವೇ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುತ್ತೇವೆ” ಎಂದು ಪುನರುಚ್ಚರಿಸಿದರು.
ಇದನ್ನೂ ಓದಿ : ಆಜಾನ್ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಆಡಳಿತ – ವಿಪಕ್ಷಗಳ ನಡುವೆ ದೊಡ್ಡ ಗದ್ದಲ!







