ಆಜಾನ್ ವಿಚಾರವಾಗಿ ವಿಧಾನ ಪರಿಷತ್‌ನಲ್ಲಿ ಆಡಳಿತ – ವಿಪಕ್ಷಗಳ ನಡುವೆ ದೊಡ್ಡ ಗದ್ದಲ!

ಬೆಳಗಾವಿ ಮಸೀದಿಗಳಲ್ಲಿ ಕೂಗುವ ಆಜಾನ್‌ನಿಂದ ಉಂಟಾಗುತ್ತಿರುವ ಶಬ್ದಮಾಲಿನ್ಯದ ಚರ್ಚೆಯು ಇಂದು ವಿಧಾನ ಪರಿಷತ್‌ನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು. ಸುಪ್ರೀಂಕೋರ್ಟ್ ಆದೇಶ ಪಾಲಿಸುವಂತೆ ಬಿಜೆಪಿ ಸದಸ್ಯರ ಆಗ್ರಹಕ್ಕೆ ಆಡಳಿತ ಪಕ್ಷದ ಸದಸ್ಯರು ಪ್ರತಿವಾದ ಮಂಡಿಸಿ ಪರಿಸ್ಥಿತಿ ತಾರಕಕ್ಕೇರಿತು.

ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿ.ಎಸ್. ಅರುಣ್ ಅವರು ಆಜಾನ್‌ನಿಂದ ಶಬ್ದಮಾಲಿನ್ಯ ಉಂಟಾಗುತ್ತಿದೆ ಎಂದು ಆರೋಪಿಸಿದರು. “ನಿಯಮದ ಪ್ರಕಾರ, ಬೆಳಗ್ಗೆ 6ರಿಂದ 10ರವರೆಗೆ ಯಾವುದೇ ಶಬ್ದಮಾಲಿನ್ಯ ಆಗಬಾರದು. ನನ್ನ ಮನೆಯ ಹಿಂದೆಯೇ ಮಸೀದಿ ಇದೆ. ಅಲ್ಲಿ ಬೆಳಗ್ಗೆ 4:45ಕ್ಕೆ ಆಜಾನ್ ಶುರುವಾಗುತ್ತೆ. 86 ವರ್ಷದ ನಮ್ಮ ತಂದೆ ಆ ಸೌಂಡ್‌ಗೆ ಎದ್ದು ಕೂರಬೇಕು. ಸುತ್ತಮುತ್ತಲಿನವರಿಗೂ ಸಮಸ್ಯೆ ಆಗಿದೆ. ಗಣೇಶೋತ್ಸವದಲ್ಲಿ ಡಿಜೆ ಜಪ್ತಿ ಮಾಡುವ ನಿಮಗೆ, ಮಸೀದಿಯವರ ವಿರುದ್ಧ ಕ್ರಮ ಕೈಗೊಳ್ಳಲು ಧೈರ್ಯವಿಲ್ಲವೇ?” ಎಂದು ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರ ವಿನಂತಿಗೂ ಅವರು ನಿಲ್ಲಿಸುವುದಿಲ್ಲ. ಸರ್ಕಾರ ಕೂಡಲೇ ಸುಪ್ರೀಂಕೋರ್ಟ್ ಆದೇಶ ಪಾಲಿಸಬೇಕು ಎಂದು ಅರುಣ್ ಆಗ್ರಹಿಸಿದರು.

ಅರುಣ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಈಶ್ವರ್ ಖಂಡ್ರೆ, ಶಬ್ದಮಾಲಿನ್ಯ ಎಲ್ಲ ಕಡೆಯೂ ಇದೆ. ಸುಪ್ರೀಂಕೋರ್ಟ್ ತೀರ್ಪಿನಂತೆ, ವಸತಿ ಪ್ರದೇಶಗಳಲ್ಲಿ 50 ಡೆಸಿಬಲ್‌ಗಿಂತ ಹೆಚ್ಚಿರಬಾರದು ಎಂದು ಇದೆ. ಸರ್ಕಾರವು ಸಮಿತಿ ರಚನೆ ಮಾಡಿ, ಡಿವೈಎಸ್ಪಿ ಮತ್ತು ಎಸಿಪಿ ಅಧ್ಯಕ್ಷತೆಯಲ್ಲಿ ಅನುಷ್ಠಾನದ ಜವಾಬ್ದಾರಿ ನೀಡಿದೆ. ದೂರು ಬಂದಲ್ಲಿ ಕ್ರಮಕೈಗೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ, ಎಂದರು.

ಇದೇ ವೇಳೆ ಸಚಿವರು, ಕೇವಲ ಆಜಾನ್ ಮಾತ್ರವಲ್ಲ, ಮದುವೆ ಸಮಾರಂಭ, ದೀಪಾವಳಿ ಹಾಗೂ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿ ನಡೆಯುತ್ತವೆ. ಇದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತೇವೆ, ಎಂದು ಭರವಸೆ ನೀಡಿದರು. ಸಚಿವರ ಉತ್ತರಕ್ಕೆ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ, ಇದು ಒಂದು ದಿನದ ಕಥೆಯಲ್ಲ, ಪ್ರತಿದಿನ ನಡೆಯುವ ಸಮಸ್ಯೆ, ಎಂದು ಕಿಡಿಕಾರಿದರು.

ಡಿ.ಎಸ್. ಅರುಣ್ ಮತ್ತೊಮ್ಮೆ ಮಾತನಾಡಿ, ಯಾರಿಗೂ ದೂರು ನೀಡಲು ಧೈರ್ಯವಿಲ್ಲ. ಯಾಕೆಂದರೆ ಇವರಿಗೆ ಸರ್ಕಾರದ ರಕ್ಷಣೆ ಇದೆ. ಮಸೀದಿಯಲ್ಲಿ 50 ಡೆಸಿಬಲ್‌ಗಿಂತ ಹತ್ತುಪಟ್ಟು ಹೆಚ್ಚು ಶಬ್ದ ಮಾಡುತ್ತಾರೆ. ಇವರ ಮೇಲೆ ಕ್ರಮ ತೆಗೆದುಕೊಳ್ಳುವ ಧೈರ್ಯವಿಲ್ಲ, ಎಂದು ತೀವ್ರ ವಾಗ್ದಾಳಿ ನಡೆಸಿದರು. ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿದ್ದಾಗ ಸಚಿವ ಖಂಡ್ರೆ, ಇದು ಸೂಕ್ಷ್ಮವಾದ ವಿಚಾರ, ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರುಣ್, ಯಾಕೆ ಸೂಕ್ಷ್ಮ ವಿಚಾರ? ಸುಪ್ರೀಂ ಆದೇಶ ಪಾಲಿಸುವ ಧೈರ್ಯವಿಲ್ಲ, ಎಂದು ವಾದ ಮುಂದುವರೆಸಿದರು.

ನಂತರ ಸಚಿವ ಖಂಡ್ರೆ, ಇದನ್ನು ರಾಜಕೀಯಕ್ಕೆ ಬಳಸಬೇಡಿ, ದೀಪಾವಳಿಯಲ್ಲಿ ಪಟಾಕಿ ಸಿಡಿಸಿ ಶಬ್ದಮಾಲಿನ್ಯ ಆಗುತ್ತದೆ, ಎಂದು ಪ್ರತ್ಯುತ್ತರ ನೀಡಿದರು. ಸಚಿವರ ಈ ಹೇಳಿಕೆಗೆ ಬಿಜೆಪಿ ಸದಸ್ಯರು ಮತ್ತಷ್ಟು ಆಕ್ರೋಶ ವ್ಯಕ್ತಪಡಿಸಿ, ದೀಪಾವಳಿ ಬಗ್ಗೆ ಮಾತನಾಡಬೇಡಿ, ನಾವು ಕೇಳಿದ್ದಕ್ಕೆ ಉತ್ತರ ಕೊಡಿ, ಎಂದು ಪಟ್ಟು ಹಿಡಿದರು. ಸದನದಲ್ಲಿ ಗದ್ದಲದ ವಾತಾವರಣ ನಿರ್ಮಾಣವಾಗುತ್ತಿದ್ದಂತೆ, ಸಭಾಪತಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಶಬ್ದಮಾಲಿನ್ಯ ನಿಯಂತ್ರಣದ ಬಗ್ಗೆ ಸರ್ಕಾರ ಯಾವ ರೀತಿ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಇದನ್ನೂ ಓದಿ : ಕುಣಿಗಲ್ ಸಹಕಾರಿ ರಂಗಕ್ಕೆ ನ್ಯಾಯ,ಮುಂದಿನ ವರ್ಷದಿಂದ ತಾರತಮ್ಯ ನಿವಾರಣೆ – ಸಿಎಂ ಸಿದ್ದರಾಮಯ್ಯ ಭರವಸೆ

Btv Kannada
Author: Btv Kannada

Read More