140 ಶಾಸಕರು ನಮ್ಮೊಂದಿಗಿದ್ದಾರೆ, ಹುಳಿ ಹಿಂಡುವ ಅಗತ್ಯವಿಲ್ಲ – ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಸವಾಲು!

ಬೆಳಗಾವಿ : ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ. ವಿರೋಧ ಪಕ್ಷದವರು ಹುಳಿ ಹಿಂಡುವ ಪ್ರಯತ್ನ ಮಾಡಬೇಕಿಲ್ಲ. 140 ಶಾಸಕರು ನಮ್ಮೊಂದಿಗಿದ್ದು, ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ, ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ವಿರೋಧ ಪಕ್ಷಕ್ಕೆ ಖಡಕ್‌ ಸಂದೇಶ ನೀಡಿದರು. ವಿಪಕ್ಷದವರ ಪ್ರಚೋದನೆಗೆ ನಮ್ಮ ಶಾಸಕರು ಜಗ್ಗುವುದಿಲ್ಲ. ಐದು ವರ್ಷಗಳ ಕಾಲ ಆಡಳಿತ ನಡೆಸಲು ಜನರು ಆಶೀರ್ವದಿಸಿದ್ದಾರೆ, ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು. ರಾಜ್ಯದಲ್ಲಿ ಬಿಜೆಪಿ ಒಂದು ಬಾರಿಯೂ ಜನಾದೇಶದೊಂದಿಗೆ ಅಧಿಕಾರಕ್ಕೆ ಬಂದಿಲ್ಲ. 2008 ಮತ್ತು 2018ರಲ್ಲಿ ಆಪರೇಷನ್ ಕಮಲದ ಮೂಲಕ ಹಿಂಬಾಗಿಲಿನಿಂದ ಅಧಿಕಾರ ಪಡೆದಿದ್ದಾರೆ, ಎಂದು ಅವರು ಆರೋಪಿಸಿದರು. ಕರ್ನಾಟಕದ ಜನ ಎಂದಿಗೂ ಬಿಜೆಪಿಗೆ ಆಶೀರ್ವಾದ ಮಾಡುವುದಿಲ್ಲ, ಎಂದೂ ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ಜನರ ನಾಡಿಮಿಡಿತ ತಿಳಿದಿದೆ. 2023ರಂತೆ, 2028ರಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿಯವರು ಸದಾ ವಿರೋಧ ಪಕ್ಷದ ಸ್ಥಾನದಲ್ಲಿಯೇ ಇರಲಿದ್ದಾರೆ, ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್‌ನಲ್ಲಿ ಹೈಕಮಾಂಡ್ ಮಾತು ಅಂತಿಮ. ಆದರೆ ಬಿಜೆಪಿಯಲ್ಲಿ ಅಧ್ಯಕ್ಷಗಿರಿ ಆಯ್ಕೆಯಲ್ಲೇ ಒಮ್ಮತವಿಲ್ಲ, ಅವರಿಗೆ ನಮ್ಮ ಬಗ್ಗೆ ಅಸೂಯೆ ಕಾಡುತ್ತಿದೆ, ಎಂದೂ ಅವರು ಹೇಳಿದರು.

ಇದು ನನ್ನ ಸರ್ಕಾರವಲ್ಲ, ನಮ್ಮ ಸರ್ಕಾರ. ಹೈಕಮಾಂಡ್ ಹೇಳುವ ತನಕ ನಾನೇ ಮುಖ್ಯಮಂತ್ರಿ, ಎಂದು ಕನಕದಾಸರ ಹೇಳಿಕೆಯನ್ನು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಇದರ ಮೂಲಕ ಅವರು ವಿರೋಧ ಪಕ್ಷದ ನಾಯಕರಿಗೆ ಮತ್ತು ಆಂತರಿಕ ಅಸಮಾಧಾನದ ವದಂತಿಗಳಿಗೆ ಉತ್ತರ ನೀಡಿದರು.

ಇದನ್ನೂ ಓದಿ : ಗ್ರೇಟರ್ ಬೆಂಗಳೂರು ಆಡಳಿತ 2ನೇ ತಿದ್ದುಪಡಿ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅನುಮೋದನೆ!

Btv Kannada
Author: Btv Kannada

Read More