ಹೈಕಮಾಂಡ್ ಹೇಳೋವರೆಗೂ ನಾನೇ ಸಿಎಂ – ಸದನದಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ನುಡಿ!

 ಬೆಳಗಾವಿ : ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, “ಹೈಕಮಾಂಡ್ ಹೇಳೋವರೆಗೂ ನಾನೇ ಮುಖ್ಯಮಂತ್ರಿ” ಎಂದು ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಷೇರು ಧನ ನೀಡುವ ವಿಚಾರದ ಚರ್ಚೆ ವೇಳೆ ಸದನದಲ್ಲಿ ಸ್ವಾರಸ್ಯಕರ ಮಾತು-ಜಗಳಕ್ಕೆ ಸಾಕ್ಷಿಯಾಯಿತು. ಕುಣಿಗಲ್ ರಂಗನಾಥ್ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಸಿಎಂ, ರಂಗನಾಥ್ ಅವರಿಗೆ ನಮ್ಮ ಮೇಲೆ ವಿಶ್ವಾಸ ಇಡಿ, ತಾರತಮ್ಯ ಆಗಿದ್ದರೆ ಬಗೆಹರಿಸುತ್ತೇವೆ ಎಂದರು.

ಈ ವೇಳೆ ಮಧ್ಯಪ್ರವೇಶಿಸಿದ ಅಶೋಕ್, ನೀವು ಉರಿಯುತ್ತಿರುವ ಬೆಂಕಿಗೆ ತುಪ್ಪ ಹಾಕಬೇ” ಎಂಬ ಸಿಎಂ ಅವರ ಮಾತು ಹಿಡಿದು ಕೆಣಕಿದರು. ಹಾಗಾದ್ರೆ ಉರಿಯುತ್ತಿದೆಯಾ ನಿಮ್ಮಲ್ಲಿ ಎಂದು ಪ್ರಶ್ನಿಸಿದರು. ಇದಕ್ಕೆ ಸಿಎಂ, ಅದು ಗಾದೆ ಕಣಯ್ಯ ಎಂದು ಸ್ಪಷ್ಟಪಡಿಸಿದರು. ಕುಣಿಗಲ್ ರಂಗನಾಥ್ ಅವರು ಡಿಕೆಶಿ ಸಿಎಂ ಆಗಲಿ ಎಂದು ಪೂಜೆ, ಪುನಸ್ಕಾರ ಮಾಡಿಸುತ್ತಿದ್ದಾರೆ ಎಂದು ಅಶೋಕ್ ಆರೋಪಿಸಿದರು. ವಿಪಕ್ಷದವರು ಏನೇ ಪ್ರಚೋದನೆ, ಕಿತಾಪತಿ ಮಾಡಿದರೂ ನಮ್ಮಲ್ಲಿ ಯಾರೂ ಪ್ರಚೋದನೆ ಆಗುವುದಿಲ್ಲ, ಎಂದು ಸಿಎಂ ತಿರುಗೇಟು ನೀಡಿದರು.

ಆರ್. ಅಶೋಕ್ ಅವರು, ನೀವೇ ಐದು ವರ್ಷ ಸಿಎಂ ಆಗಿರುತ್ತೀರಾ ಸರ್, ಗ್ಯಾರಂಟಿನಾ?” ಎಂದು ನೇರವಾಗಿ ಪ್ರಶ್ನಿಸಿದರು. ಇದಕ್ಕೆ ಖಚಿತ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ಐದು ವರ್ಷ ಇರಿ ಅಂತ ಜನ ಆಶೀರ್ವಾದ ಮಾಡಿದ್ದಾರೆ, ನಾವೇ ಐದು ವರ್ಷ ಇರುತ್ತೇವೆ ಎಂದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸಚಿವ ಡಾ. ಜಿ. ಪರಮೇಶ್ವರ್, ಜನ ಐದು ವರ್ಷ ಆಡಳಿತ ಮಾಡಿ ಅಂತ ಆಶೀರ್ವಾದ ಮಾಡಿದ್ದಾರೆ. ಐದು ವರ್ಷ ನಾವು ಇರುತ್ತೇವೆ ಅಂದಮೇಲೆ ನಿಮಗೇಕೆ ಅನುಮಾನ? ಎಂದು ವಿಪಕ್ಷವನ್ನು ಪ್ರಶ್ನಿಸಿದರು.

140 ಶಾಸಕರು ನಮ್ಮ ಜೊತೆ ಇದ್ದಾರೆ. ಜನ ಐದು ವರ್ಷಕ್ಕೆ ಆಶೀರ್ವಾದ ಮಾಡಿದ್ದಾರೆ. 2028ಕ್ಕೂ ನಾವೇ ಬರುತ್ತೇವೆ. ಬಿಜೆಪಿಯನ್ನು ಜನ ಯಾವತ್ತೂ ಅಧಿಕಾರಕ್ಕೆ ತರಲ್ಲ. ಜನರ ಆಶೀರ್ವಾದ ಪಡ್ಕೊಂಡು ಬಂದಿದ್ದೀರಾ ನೀವು? ಆಪರೇಷನ್ ಕಮಲ ಮಾಡಿ ಹಿಂಬಾಗಿಲ ಮೂಲಕ ಬಂದಿದ್ದೀರ, ಜನ ನಿಮಗೆ ಆಶೀರ್ವಾದ ಮಾಡಲ್ಲ ಅಂತ ಸಿಎಂ ಟಾಂಗ್ ಕೊಟ್ಟರು. 2018 ರಲ್ಲಿ ಜನ ನಿಮಗೂ ಆಶೀರ್ವಾದ ಮಾಡಿರ್ಲಿಲ್ಲ. ಜೆಡಿಎಸ್ ಜತೆ ಸೇರಿ ಸರ್ಕಾರ ಮಾಡಿದ್ರಲ್ಲ, ಅವರ ಮನೆ ಬಾಗಿಲಿಗೆ ಹೋಗಿದ್ರಲ್ಲ ಅಂತ ಅಶೋಕ್ ತಿರುಗೇಟು ಕೊಟ್ಟರು. ನಾವು ಅವರ ಮನೆ ಬಾಗಿಲಿಗೆ ಹೋಗಿರಲಿಲ್ಲ. ಬಿಜೆಪಿ ಬರಬಾರದು ಅಂತ ಅವರೇ ಬಂದಿದ್ರು, ನೀವ್ಯಾಕೆ ಅವರ ಜತೆ ಹೋಗಿದ್ದೀರಿ ಅಂತ ಸಿಎಂ ಮರುಪ್ರಶ್ನೆ ಹಾಕಿದರು.

ಸಿಎಂ ಮಾತಿನಲ್ಲಿ ಬಳಕೆಯಾದ ‘ನಾನು’ ಮತ್ತು ‘ನಾವು’ ಪದಗಳ ವ್ಯತ್ಯಾಸದ ಬಗ್ಗೆ ಬಿಜೆಪಿ ಸದಸ್ಯರು ಗಮನ ಸೆಳೆದರು. ಸುರೇಶ್ ಕುಮಾರ್ ಮಾತನಾಡಿ, ಇಷ್ಟು ದಿನ ಸಿಎಂ ನಾನೇ ಮುಂದುವರೆಯುತ್ತೇನೆ ಎನ್ನುತ್ತಿದ್ದರು. ಈಗ ಏಕವಚನದಿಂದ ಬಹುವಚನಕ್ಕೆ, ನಾವು ಎಂಬಲ್ಲಿಗೆ ಬಂದಿದ್ದಾರೆ, ಎಂದು ಕಾಲೆಳೆದರು.

ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಸಿಎಂ, ನಾನು ಹೋದರೆ ಹೋದೇನು… ಇದು ಕನಕದಾಸರು ಹೇಳಿರೋದು. ಕನಕದಾಸರಿಗೂ ನನಗೂ ಹೋಲಿಕೆ ಮಾಡಬೇಡಿ. ನಾವು ಸರ್ಕಾರದಲ್ಲಿ. ಇದು ಬಹುವಚನ. ನಾನೇ ಮುಖ್ಯಮಂತ್ರಿ, ಈಗಲೂ ಮುಖ್ಯಮಂತ್ರಿ, ಮುಂದೇನೂ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂದು ಪ್ರಬಲವಾಗಿ ಘೋಷಿಸಿದರು.

ಸಿಎಂ ಸಿದ್ದರಾಮಯ್ಯ ಅವರ ಈ ಸ್ಪಷ್ಟನೆಗೆ ಆಡಳಿತ ಪಕ್ಷದ ಸದಸ್ಯರು ಮೇಜು ಕುಟ್ಟಿ ಬೆಂಬಲ ಸೂಚಿಸಿದರು. ಇದರೊಂದಿಗೆ, ಮುಖ್ಯಮಂತ್ರಿ ಹುದ್ದೆಯ ಬಗ್ಗೆ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಊಹಾಪೋಹಗಳಿಗೆ ಸದ್ಯಕ್ಕೆ ಸಿಎಂ ಅವರೇ ತೆರೆ ಎಳೆದಂತಾಗಿದೆ.

ಸುನಿಲ್ ಕುಮಾರ್ ಎದ್ದುನಿಂತು, ನಾನೇ ಮುಂದಿನ ಐದು ವರ್ಷ ಸಿಎಂ ಅಂದಿದ್ರರಲ್ಲ ನೀವು ಈಗೇನಂತೀರಿ ಎಂದು ಪ್ರಶ್ನಿಸಿದರು. ಸಿಎಂ ಪ್ರತಿಕ್ರಿಯಿಸಿ, ನೀವ್ಯಾಕೆ ಮೂರು ಜನ ಸಿಎಂ ಮಾಡಿದ್ರಿ? ಈಗಲೂ ನಾನೇ ಮುಖ್ಯಮಂತ್ರಿ, ಈಗಲೂ ನಾನೇ ಮುಖ್ಯಮಂತ್ರಿ, ಮುಂದೇನೂ ಮುಖ್ಯಮಂತ್ರಿ. ಹೈಕಮಾಂಡ್ ಹೇಳುವವರೆಗೂ ನಾನೇ ಮುಖ್ಯಮಂತ್ರಿ ಎಂದು ಸಿಎಂ ಉತ್ತರ ಕೊಟ್ಟರು. ನೀವು ಯಾಕ್ರಿ ಮೂರು ಮೂರು ಸಿಎಂ ಬದಲಾಯಿಸಿದ್ರಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ಇದನ್ನೂ ಓದಿ : ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ – ಬೆಳ್ಳಂಬೆಳಗ್ಗೆ ಆತಂಕ, ಭದ್ರತಾ ಸಿಬ್ಬಂದಿ ದೌಡು!

Btv Kannada
Author: Btv Kannada

Read More