ತುಮಕೂರು ಡಿಸಿ ಕಚೇರಿಗೆ ಬಾಂಬ್ ಬೆದರಿಕೆ – ಬೆಳ್ಳಂಬೆಳಗ್ಗೆ ಆತಂಕ, ಭದ್ರತಾ ಸಿಬ್ಬಂದಿ ದೌಡು!

ತುಮಕೂರು : ಜಿಲ್ಲಾ ಕೇಂದ್ರವಾದ ತುಮಕೂರಿನ ಡಿಸಿ ಕಚೇರಿಗೆ ಇಂದು ಬೆಳ್ಳಂಬೆಳಗ್ಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರಿಂದ ಭಾರೀ ಆತಂಕ ಸೃಷ್ಟಿಯಾಗಿದೆ. ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಅಧಿಕೃತ ಇ-ಮೇಲ್‌ಗೆ ಬೆಳಗ್ಗೆ 6.59ಕ್ಕೆ ಬಾಂಬ್ ಇಟ್ಟಿರುವುದಾಗಿ ಸಂದೇಶ ಬಂದಿದೆ. ತಕ್ಷಣವೇ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು.

ಮಾಹಿತಿ ತಿಳಿಯುತ್ತಿದ್ದಂತೆ ಬಾಂಬ್ ಸ್ಕ್ವಾಡ್ ಮತ್ತು ಬಾಂಬ್ ನಿಷ್ಕ್ರಿಯ ದಳದ ತಜ್ಞರು ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಧಾವಿಸಿದರು. ಡಿವೈಎಸ್ಪಿ ಚಂದ್ರಶೇಖರ್, ಇನ್ಸ್‌ಪೆಕ್ಟರ್ ಅವಿನಾಶ್, ಸಬ್ ಇನ್ಸ್‌ಪೆಕ್ಟರ್ ಚೇತನ್ ಮತ್ತು ತಂಡದ ನೇತೃತ್ವದಲ್ಲಿ ಕಚೇರಿಯ ಪ್ರತಿ ಮೂಲೆಯನ್ನೂ ತೀವ್ರವಾಗಿ ಪರಿಶೀಲಿಸಲಾಯಿತು.

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸರು, ತಕ್ಷಣವೇ ಸಿಬ್ಬಂದಿಯನ್ನು ಕಚೇರಿ ಒಳಗೆ ಬಿಡದಂತೆ ನಿರ್ಬಂಧ ವಿಧಿಸಿದರು. ಡಿಸಿ ಕೊಠಡಿ ಹಾಗೂ ಆಪ್ತ ಸಹಾಯಕರ ಕಚೇರಿಯನ್ನು ವಿಶೇಷವಾಗಿ ಪರಿಶೀಲಿಸಲಾಯಿತು. ಕಚೇರಿಯ ಮುಖ್ಯ ದ್ವಾರದಲ್ಲಿ ಪ್ರತಿಯೊಬ್ಬ ಸಿಬ್ಬಂದಿಯನ್ನೂ ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಒಳಗೆ ಬಿಡಲಾಯಿತು. ಸ್ಥಳದಲ್ಲಿ ತುಮಕೂರು ಸಬ್ ಡಿವಿಷನ್ ಪೊಲೀಸರು ಬೀಡು ಬಿಟ್ಟಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಬಾಂಬ್ ಬೆದರಿಕೆಯಿಂದಾಗಿ ಡಿಸಿ ಕಚೇರಿಯಲ್ಲಿ ನಡೆಯಬೇಕಿದ್ದ ಬಹುತೇಕ ಸಭೆಗಳು ರದ್ದಾಗಿವೆ. ಕಚೇರಿಯಿಂದ ಹೊರಗೆ ನಿಂತ ಅಧಿಕಾರಿಗಳು ಆತಂಕದಲ್ಲಿ ಕಾಲ ಕಳೆದರು. ಪರಿಸ್ಥಿತಿಯ ಗಂಭೀರತೆ ಅರಿತ ಎಡಿಸಿ (ADC) ತಿಪ್ಪೇಸ್ವಾಮಿ ಅವರು ಹಿರಿಯ ಅಧಿಕಾರಿಗಳ ಜೊತೆ ಸುಮಾರು 20 ನಿಮಿಷಗಳ ಕಾಲ ಸಭೆ ನಡೆಸಿ, ನಂತರ ಕಚೇರಿಯಿಂದ ನಿರ್ಗಮಿಸಿದರು.

ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಬೆದರಿಕೆ ಇ-ಮೇಲ್ ಕಳುಹಿಸಿದವರ ಪತ್ತೆಗಾಗಿ ತನಿಖೆ ತೀವ್ರಗೊಳಿಸಿದ್ದಾರೆ. ಬಾಂಬ್ ಪತ್ತೆ ಕಾರ್ಯಾಚರಣೆ ಮುಂದುವರೆದಿದ್ದು, ಕಚೇರಿ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ : ‘45’ ಟ್ರೇಲರ್​ಗೆ ಭಾರಿ ಮೆಚ್ಚುಗೆ – ಹಿಂದೆಂದೂ ಕಾಣದ ಅವತಾರದಲ್ಲಿ ಶಿವಣ್ಣ.. ಫ್ಯಾನ್ಸ್‌ ಫಿದಾ!

Btv Kannada
Author: Btv Kannada

Read More