ವಿಜಯನಗರ : ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಆರೋಪದ ಹಿನ್ನೆಲೆಯಲ್ಲಿ, ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳ್ಳಂಬೆಳಗ್ಗೆ ವಿಜಯನಗರ DHO ಡಾ. ಶಂಕರ್ ನಾಯ್ಕ್ ಅವರ ಕಚೇರಿ, ಮನೆ, ಮತ್ತು ಆಸ್ಪತ್ರೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ, ದಾಖಲೆಗಳನ್ನು ಶೋಧಿಸಿದ್ದಾರೆ. DYSP ಸಚಿನ್ ನೇತೃತ್ವದಲ್ಲಿ PI ಅಮರೇಶ್, PI ರಾಜೇಶ್ ಹಾಗೂ ಕೊಪ್ಪಳ ಮತ್ತು ಬಳ್ಳಾರಿ ಲೋಕಾಯುಕ್ತ ಅಧಿಕಾರಿಗಳ ತಂಡವು ಈ ಜಂಟಿ ಕಾರ್ಯಾಚರಣೆ ನಡೆಸಿದೆ.

ದಾಳಿ ನಡೆದ ಪ್ರಮುಖ ಸ್ಥಳಗಳು, ವಿಜಯನಗರ DHO ಕಚೇರಿ, DHO ಅವರ ನಿವಾಸ, DHO ಪತ್ನಿಗೆ ಸೇರಿದ ಸಮರ್ಥ ಆಸ್ಪತ್ರೆ
DHO ಡಾ. ಶಂಕರ್ ನಾಯ್ಕ್ ಅವರ ಪತ್ನಿಯ ‘ಸಮರ್ಥ ಆಸ್ಪತ್ರೆ’ಯಲ್ಲಿ ಲೋಕಾಯುಕ್ತರು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಆಸ್ಪತ್ರೆಯ OPD ಮತ್ತು ಮೆಡಿಕಲ್ ಸ್ಟೋರ್‌ನಲ್ಲಿನ ಔಷಧಿಗಳ ಸಂಗ್ರಹ, ಮೂಲ ಮತ್ತು ಬಳಕೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಸರ್ಕಾರಿ ಯೋಜನೆಗಳ ಔಷಧಿಗಳ ದುರುಪಯೋಗದ ಸಾಧ್ಯತೆಗಳ ಬಗ್ಗೆ ಲೋಕಾ ಅಧಿಕಾರಿಗಳು ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ದಾಳಿ ನಡೆದಾಗ DHO ಡಾ. ಶಂಕರ್ ನಾಯ್ಕ್ ತಮ್ಮ ಆಸ್ಪತ್ರೆಯ ಹಿಂಭಾಗದ ಮನೆಯಲ್ಲಿದ್ದರು. ಅವರ ಸಮ್ಮುಖದಲ್ಲಿ ಲೋಕಾ ಅಧಿಕಾರಿಗಳು ಆಸ್ತಿ ಪತ್ರಗಳು, ಬ್ಯಾಂಕ್ ಖಾತೆಗಳ ವಿವರಗಳು ಮತ್ತು ಇತರೆ ಮಹತ್ವದ ದಾಖಲೆಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಧಾರವಾಡದಲ್ಲೂ ಲೋಕಾ ರೇಡ್ : ಲೋಕಾಯುಕ್ತ ಅಧಿಕಾರಿಗಳು ಇಂದು ಧಾರವಾಡದಲ್ಲಿ ಭಾರೀ ಕಾರ್ಯಾಚರಣೆ ನಡೆಸಿ, ಜಂಟಿ ಕೃಷಿ ನಿರ್ದೇಶಕ ರಾಜಶೇಖರ್ ಅವರ ಮನೆ ಮೇಲೆ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ದಾಳಿಯಿಂದ ಜಿಲ್ಲೆಯ ಭ್ರಷ್ಟ ಅಧಿಕಾರಿಗಳ ವಲಯದಲ್ಲಿ ತೀವ್ರ ನಡುಕ ಉಂಟಾಗಿದೆ. ರಾಜಶೇಖರ್ ಅವರು ಪ್ರಸ್ತುತ ಬೆಳಗಾವಿಯ ಜಾಗೃತ ಕೋಶ, ಸಚಿವಾಲಯ ವಿಭಾಗ, ಕೃಷಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳ ತಂಡವು ರಾಜಶೇಖರ್ ಅವರ ಧಾರವಾಡದ ನಿವಾಸದ ಮೇಲೆ ದಾಳಿ ನಡೆಸಿದೆ. ಮನೆ ನಂ: 45/79/3, ಅಂಜನಾದ್ರಿ ಬಿಲ್ಡಿಂಗ್, 3 ನೇ ಅಡ್ಡರಸ್ತೆ, ಸಿಲ್ವರ್ ಅರ್ಚಡ್ರ, ಕೇಲಗೇರಿ ರಸ್ತೆ. ಬೆಳಗ್ಗೆ ದಾಳಿ ಆರಂಭಿಸಿದ ಅಧಿಕಾರಿಗಳು ಮನೆಯ ಇಂಚಿಂಚೂ ಜಾಗವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದ್ದಾರೆ. ಆಸ್ತಿ ವಿವರಗಳಿಗಾಗಿ, ಮನೆಯೊಳಗಿನ ಪತ್ರಗಳು ಹಾಗೂ ದಾಖಲೆಗಳಿಗಾಗಿ ಶೋಧ ಕಾರ್ಯ ತೀವ್ರವಾಗಿದೆ.
ಅಧಿಕಾರಿಗಳು ಆಸ್ತಿ- ಪಾಸ್ತಿ, ಬ್ಯಾಂಕ್ ಖಾತೆ ಹಾಗೂ ಹೂಡಿಕೆಗಳಿಗೆ ಸಂಬಂಧಿಸಿದ ಪ್ರತಿಯೊಂದು ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುತ್ತಿದ್ದಾರೆ. ಆದಾಯಕ್ಕಿಂತ ಹೆಚ್ಚು ಅಕ್ರಮ ಆಸ್ತಿ ಗಳಿಸಿದ ಬಗ್ಗೆ ಬಂದ ಖಚಿತ ದೂರಿನ ಮೇರೆಗೆ ಈ ದಾಳಿ ನಡೆಸಲಾಗಿದೆ.
ಇದನ್ನೂ ಓದಿ : ಚಳಿಗಾಲದ ಅಧಿವೇಶನದಲ್ಲೂ ಸಿಎಂ ಕುರ್ಚಿ ಕಾಳಗ – ಸಿದ್ದರಾಮಯ್ಯ ಕಾಲೆಳೆದ ಆರ್. ಅಶೋಕ್!







