ಬೆಂಗಳೂರು : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆಯುತ್ತಿರುವ ಸೈಬರ್ ವಂಚನೆ ಜಾಲಕ್ಕೆ ವಿದ್ಯಾವಂತರೇ ಟಾರ್ಗೆಟ್ ಆಗುತ್ತಿದ್ದಾರೆ ಎಂಬುದಕ್ಕೆ ಮತ್ತೊಂದು ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಬಬಿತಾ ದಾಸ್ ಎಂಬುವವರು ವಂಚಕರ ಮಾತಿಗೆ ಹೆದರಿ ಬರೋಬ್ಬರಿ 2 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಬಬಿತಾ ಅವರಿಗೆ ಬ್ಲೂ ಡಾರ್ಟ್ ಕೊರಿಯರ್ ಕಂಪನಿಯಿಂದ ಬಂದಂತೆ ಒಂದು ಕರೆ ಬಂದಿತ್ತು. ಬ್ಲೂ ಡಾರ್ಟ್ ಕೋರಿಯರ್ನಲ್ಲಿ ಬ್ಯಾಗೇಜ್ ಒಂದು ಸಿಕ್ಕಿದೆ,
ಆ ಬ್ಯಾಗೇಜ್ ನಿಮ್ಮ ಆಧಾರ್ ಕಾರ್ಡ್ನೊಂದಿಗೆ ಲಿಂಕ್ ಆಗಿದೆ, ನಾವು ಮುಂಬೈ ಪೊಲೀಸರು.. ನಾವೀಗ ನಿಮ್ಮನ್ನ ಅರೆಸ್ಟ್ ಮಾಡ್ತೀವಿ ಎಂದಿದ್ದಾರೆ.

ನಾವು ನಿಮ್ಮನ್ನ ವೆರಿಫೈ ಮಾಡೋವರೆಗೂ ಎಲ್ಲೂ ಹೋಗೋ ಹಾಗಿಲ್ಲ, ನಾವು ಹೇಳೋ ಟೀಂ ಆ್ಯಪ್ ನಿಮ್ಮ ಫೋನ್ನಲ್ಲಿ ಇನ್ಸ್ಟಾಲ್ ಮಾಡ್ಬೇಕು. ನಾವು ಹೇಳಿದಷ್ಟು ಹಣವನ್ನು ನಮ್ಮ ಖಾತೆಗೆ ಹಾಕ್ಬೇಕು, ಇಲ್ದೇ ಹೋದ್ರೆ ನಿಮ್ಮ ಮುದ್ದಾದ ಮಗನಿಗೆ ಸಮಸ್ಯೆಯಾಗೋದು ಶತಸಿದ್ಧ ಎಂದಿದ್ದಾರೆ. ಹೀಗೆ ಮಗ ಎಂಬ ಸೆಂಟಿಮೆಂಟ್ ಬರ್ತಿದ್ದಂತೆ ಬಬಿತಾ ಕಕ್ಕಾಬಿಕ್ಕಿಯಾಗಿದ್ದು, ಮಗನ ಲೈಫು ಸ್ಫಾಯ್ಲ್ ಆಗುತ್ತೆ ಅಂತ ಹೆದರಿ ವಂಚಕರ ಪ್ರತೀ ಮಾತಿಗೆ ಓಕೆ ಅಂದಿದ್ರು.

ಅದರಂತೆ ಬಬಿತಾ ಮಾಲೂರಿನಲ್ಲಿದ್ದ 2 ಸೈಟ್ ಹಾಫ್ ರೇಟ್ಗೆ ಸೇಲ್ ಮಾಡ್ತಾರೆ. ವಿಜ್ಞಾನ ನಗರದಲ್ಲಿರೋ ಫ್ಲ್ಯಾಟ್ ಕೂಡ ಸಿಕ್ಕಷ್ಟು ರೇಟ್ಗೆ ಸೇಲ್ ಮಾಡ್ತಾರೆ, ಪ್ರಾಪರ್ಟಿ ಮಾರಿದ ಹಣವನ್ನು ವಂಚಕರ ಅಕೌಂಟ್ಗೆ ಬಬಿತಾ ಜಮಾ ಮಾಡ್ತಾರೆ. ಅದೇ ರೀತಿ ICICI ಬ್ಯಾಂಕ್ನಲ್ಲೂ ಲೋನ್ ಮಾಡಿ ವಂಚಕರಿಗೆ ನೀಡ್ತಾರೆ. ಒಟ್ಟು 2 ಕೋಟಿ ಹಣವನ್ನು ಸೈಬರ್ ವಂಚಕರಿಗೆ ನೀಡಿ ಮಹಿಳೆ ಮೋಸ ಹೋಗಿದ್ದಾರೆ. ನಂತರ ತಾನು ವಂಚನೆಗೆ ಒಳಗಾಗಿರೋದು ತಿಳಿದ ಬಬಿತಾ ಆ ನಂಬರ್ಗೆ ಕಾಲ್ ಮಾಡಿದಾಗ ಫೋನ್ ಸ್ವಿಚ್ ಆಫ್ ಬಂದಿದೆ. ಈ ಕುರಿತು ಸೈಬರ್ ಪೊಲೀಸರಿಗೆ ದೂರು ನೀಡಲಾಗಿದೆ.


ಇದನ್ನೂ ಓದಿ : ಕುವೆಂಪು ಸಾಧನೆ, ಕೊಡುಗೆ ಕುರಿತು ನಾಳೆ ದೆಹಲಿಯಲ್ಲಿ ವಿಚಾರ ಸಂಕೀರ್ಣ – ಆದಿಚುಂಚನಗಿರಿ ಶ್ರೀಗಳು ಸೇರಿ ಅನೇಕ ಗಣ್ಯರು ಭಾಗಿ!







