ಬೆಂಗಳೂರು : ಜಗತ್ತಲ್ಲಿ ಮಕ್ಕಳು ಕುಲಗೆಟ್ಟಿರಬಹುದು. ಆದ್ರೆ, ತಾಯಿ ನಿಷ್ಕಲ್ಮಶ ಹೃದಯದವಳೇ ಆಗಿರ್ತಾಳೆ. ಇಲ್ಲೊಬ್ಬ ತಾಯಿ ತನ್ನ ಮಗಳನ್ನೇ ವೇಶ್ಯಾವಾಟಿಕೆಗೆ ತಳ್ಳಿ ಇಂತವ್ಳೂ ತಾಯಿನಾ..? ಅನ್ನೋ ಪ್ರಶ್ನೆಯನ್ನ ಹುಟ್ಟುವಂತೆ ಮಾಡಿದ್ದಾಳೆ.
ಹೌದು, ಇದು ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೇ ನಿಲ್ದಾಣದ ಫ್ಲ್ಯಾಟ್ ಫಾರಂನಲ್ಲಿ ಸಿಕ್ಕ ಮೈನೆರೆಯದ ಹೆಣ್ಮಗಳೊಬ್ಬಳ ಕರುಣಾಜನಕ ಕಥೆ-ವ್ಯಥೆ. ನವೆಂಬರ್ 6ನೇ ತಾರೀಕು ಮೆಜೆಸ್ಟಿಕ್ ರೈಲ್ವೇ ನಿಲ್ದಾಣದಲ್ಲಿ ಕಣ್ಣೀರು ಹಾಕ್ತಾ 17ರ ಮುದ್ದುಮುಖದ ಹೆಣ್ಮಗಳು ಕಾಣಿಸಿಕೊಳ್ತಾಳೆ. ಇದೇ ವೇಳೆ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ನ ಅಧಿಕಾರಿಗಳು ಸ್ಪೆಷಲ್ ಡ್ರೈವ್ ನಲ್ಲಿ ಬ್ಯುಸಿಯಾಗಿರ್ತಾರೆ. ಅತ್ತು ಅತ್ತು ಕಣ್ಣನ್ನ ಕೆಂಡದಂತೆ ಮಾಡಿಕೊಂಡಿದ್ದ ಆ ಮುದ್ದಾದ ಹೆಣ್ಮಗಳನ್ನ ಬಳಿ RPF ಅಧಿಕಾರಿಗಳು ನೋಡಿ ಮಾತನಾಡಿಸ್ತಾರೆ. ಆಗ್ಲೇ ಆ 17ರ ಬಾಲೆ ಕಣ್ಣೀರಲ್ಲೇ ಕೈತೊಳೆದ ಕರುಣಾಜನಕ ಕಥೆಯನ್ನ ವ್ಯಥೆಬರಿತ ಮುಖದಲ್ಲೇ ಹೇಳೋಕೆ ಶುರುಮಾಡಿದ್ದಳು.
ನನ್ನ ಹೆಸರು ಹೀಗೀಗೆ..ನಾನು ಕಳೆದ ಮೂರು ವರ್ಷದ ಹಿಂದೆ ನನ್ನ ತಾಯಿಯಿಂದಲೇ ಅನ್ಯಾಯಕ್ಕೊಳಗಾಗಿದ್ದೆ. ಹೆತ್ತವಳು ದೆಹಲಿಯ ವೇಶ್ಯಾವಾಟಿಕೆಯನ್ನ ಆಳ್ತಿದ್ದ ಮುಸ್ಕಾನ್ ಎಂಬಾಕೆಗೆ ನನ್ನನ್ನ ಮಾರಿಬಿಟ್ಟಿದ್ದಳು. ಅಮ್ಮಾ ನಾನ್ ಹೋಗಲ್ಲ..ನಿನ್ನ ಮಡಿಲಲ್ಲೇ ಪ್ರತೀ ರಾತ್ರಿ ಕಳೀತೀನಮ್ಮ.. ಊಟ-ನಿದ್ದೆ ಬೇಡ ನಿನ್ನ ಸೆರಗ ಶಾಖವೇ ಸಾಕು ಅಂತ ನಾನಾ ರೀತಿಯಲ್ಲಿ ಗೋಗರೆದಿದ್ದೆ. ಪುಡಿಗಾಸು ಪಡೆದ ನನ್ನವ್ವ ನನ್ನನ್ನ ಮೈಮಾರಾಟ ಜಾಲಕ್ಕೆ ಮಾರ್ಬಿಟ್ಲು. ದೆಹಲಿಯ ಚಿಕ್ಕ ಏರಿಯಾದ ಚಿಕ್ಕ ರೂಮಲ್ಲೇ ನನ್ನನ್ನ ಮುಸ್ಕಾನ್ ಎಂಬ ಮಹಿಳೆ ಕೂಡಿಹಾಕಿ ನಿತ್ಯವೂ ನರಕವನ್ನ ತೋರಿಸ್ತಿದ್ಲು. ಬಿಸಿನೀರನ್ನ ಮೈಗೆರಚಿ ಆ ನೋವಲ್ಲಿ ನಾನು ನರಳ್ತಿದ್ರೆ ಮುಸ್ಕಾನ್ ಮುಗುಳ್ನಕ್ಕು ಮತ್ತೆ ಬಿಸಿನೀರನ್ನ ಮೈಗೆರಚುತ್ತಿದ್ದಳು. ಹೀಗೆ ಒಂದು ವರ್ಷ ಕಾಮದ ಹುಚ್ಚಿಡಿಸಿಕೊಂಡಿದ್ದ ಪುರುಷರ ಬ್ರೆಡ್ಡು- ಬನ್ನು ನಾನೇ ಆಗಿದ್ದೆ ಅಂತ ಹೇಳ್ತಿದ್ದಂತೆ ಕಣ್ಣೀರು ಜಾರಿ ನೆಲಕ್ಕಪ್ಪಳಿಸಿತ್ತು.

ಹೀಗೆ ದೆಹಲಿಯ ವೇಶ್ಯಾವಾಟಿಕೆಯಿಂದ ಹಿಂಡೆಹಿಪ್ಪೆಯಾಗಿದ್ದ ನನ್ನನ್ನ ಬೆಂಗಳೂರಿನ ಕೋರಮಂಗಲಕ್ಕೆ ಎಳೆತರ್ಲಾಗಿತ್ತು. ಕೋರಮಂಗಲದ ನಂದಿನ ಸ್ಫಾನಲ್ಲಿ ಕೆಲಸ ಮಾಡ್ಕೊಂಡು ದಿನಕ್ಕೆ ಏಳೆಂಟು ಕಾಮಪಿಶಾಚಿಗಳನ್ನ ತಣಿಸಿ ಒಪ್ಪತ್ತಿನ ಗಂಜಿಯಲ್ಲಿ ಜೀವನ ಸಾಗಿಸ್ತಿದ್ದೆ. ಇತ್ತೀಚೆಗೆ ಬೆಂಗಳೂರು ಪೊಲೀಸ್ರು ವೇಶ್ಯಾವಾಟಿಕೆಯ ಮೇಲೆ ರೈಡ್ ಮಾಡ್ತಾರೆ ಅಂತ ತಿಳಿದು ನನ್ನನ್ನ ವೇಶ್ಯಾವಾಟಿಕೆಯಲ್ಲೇ ತಳ್ಳಿ ಕಾಸುಮಾಡಿಕೊಳ್ತಿದ್ದ ಸ್ನೇಹಾ ಹಾಗೂ ಅಯಾನ್ ಮೆಜೆಸ್ಟಿಕ್ ರೈಲ್ವೇ ನಿಲ್ದಾಣಕ್ಕೆ ಕರೆತಂದು ಬಿಟ್ಟೋಗಿದ್ರು. ಬೆಳಿಗ್ಗೆ ತಿಂಡಿ..ಮಧ್ಯಾಹ್ನದ ಊಟಕ್ಕೂ ಇಲ್ದೇ ಕಣ್ಣು ಮಂಜಾಗಿದ್ದ ನನಗೆ ನೀವು ಕಾಣಿಸಿದ್ರಿ ಸರ್ ಅಂತ ಹೆಣ್ಮಗಳು RPF ಅಧಿಕಾರಿಗಳ ಮುಂದೆ ಗೋಳಿನ ಕಥೆಯನ್ನ ಹೇಳಿದ್ದಳು.

ಮನಸ್ಸಿಲ್ಲದ ಮನಸ್ಸಲ್ಲೇ ಮೈಮಾರಿಕೊಂಡು ಮೂರೊತ್ತಿನ ಊಟ ಮಾಡ್ತಿದ್ದ ಹೆಣ್ಮಗಳ ಮಣ್ಣಾದ ಭವಿಷ್ಯವನ್ನ ನೋಡಿ RPF ಅಧಿಕಾರಿಗಳು ಮೊಮ್ಮಲ ಮರುಗಿದ್ದರು. ತಕ್ಷಣ ಮೆಜೆಸ್ಟಿಕ್ ರೈಲ್ವೇ ಪೊಲೀಸರಿಗೆ ನೊಂದ ಹೆಣ್ಮಗಳನ್ನ ಒಪ್ಪಿಸಿ ಪೋಕ್ಸೋ ಪ್ರಕರಣವನ್ನ ದಾಖಲಾಗುವಂತೆ ಮಾಡ್ತಾರೆ. ಇದೀಗ ಪ್ರಕರಣ ದಾಖಲಿಸಿಕೊಂಡ ರೈಲ್ವೇ ಪೊಲೀಸ್ರು ಹೆಣ್ಮಗಳ ಭವಿಷ್ಯದ ಜೊತೆ ಆಟವಾಡಿದ ಇಬ್ಬರು ಪಿಂಪ್ ಗಳನ್ನ ಬಂಧಿಸಿದ್ದಾರೆ. ಪಿಂಪ್ ಗಳಾದ ಇಬ್ರಾಹಿಂ ಹಾಗೂ ಸ್ನೇಹಾ ಎಂಬ ದರಿದ್ರಗಳನ್ನ ಅರೆಸ್ಟ್ ಮಾಡಿದ್ದಾರೆ. ಉಳಿದ ಕಾಮಸುರರ ಜೇಬಲ್ಲಿ ಬದುಕ್ತಿರೋ ಮೂರುಬಿಟ್ಟವರ ಹುಡುಕಾಟದಲ್ಲಿ ರೈಲ್ವೇ ಪೊಲೀಸರು ಫುಲ್ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ : ಜೋಗಿ ಪ್ರೇಮ್ ಗರಡಿಯಿಂದ ಮತ್ತೊಬ್ಬ ನಿರ್ದೇಶಕ – ಶಿವಮಂಜು ಸಾರಥ್ಯದಲ್ಲಿ ಹೊಸ ಚಿತ್ರಕ್ಕೆ ಚಾಲನೆ!







