ಚಿಕ್ಕಬಳ್ಳಾಪುರ : ವಿದ್ಯುತ್ ಪಂಪ್‌ಸೆಟ್‌ಗಳ ಕೇಬಲ್ ಕಳ್ಳತನದಿಂದ ಬೇಸತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಕಾಚಕಡತ ಗ್ರಾಮದ ರೈತರು, ನೀರಾವರಿ ಸಮಸ್ಯೆಯಿಂದ ಕುಪಿತಗೊಂಡು ಕಳ್ಳತನಕ್ಕೆ ಬಂದಿದ್ದ ಇಬ್ಬರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಕಾಚಕಡತ ಗ್ರಾಮದ ಸುತ್ತಮುತ್ತ ನಿರಂತರವಾಗಿ ವಿದ್ಯುತ್ ಪಂಪ್‌ಸೆಟ್‌ಗಳ ಕೇಬಲ್ ಕಳ್ಳತನವಾಗುತ್ತಿತ್ತು. ಇದರಿಂದಾಗಿ ರೈತರಿಗೆ ನೀರಾವರಿ ತೊಂದರೆಯಾಗಿ, ಪ್ರತಿ ಬಾರಿ ಹೊಸ ಕೇಬಲ್ ಅಳವಡಿಕೆಗೆ ಸಾವಿರಾರು ರೂಪಾಯಿ ಖರ್ಚು ಮಾಡಬೇಕಾಗಿತ್ತು. ಈ ನಷ್ಟ ಮತ್ತು ಕಿರಿಕಿರಿಯಿಂದ ರೈತರಲ್ಲಿ ತೀವ್ರ ಆಕ್ರೋಶ ಮನೆ ಮಾಡಿತ್ತು.

ಕಳ್ಳರ ಉಪಟಳದಿಂದ ಬೇಸತ್ತ ರೈತರು ಅವರನ್ನು ಹಿಡಿಯಲು ನಿರ್ಧರಿಸಿದರು. ಕಳ್ಳರು ಬರುವ ನಿರೀಕ್ಷೆಯಲ್ಲಿ ರಾತ್ರಿ ಹೊಲಗಳ ಬಳಿ ಕಾದು ಕುಳಿತಿದ್ದ ರೈತರಿಗೆ, ಕೇಬಲ್ ಕದಿಯಲು ಬಂದಿದ್ದ ಅಶೋಕ್ ಮತ್ತು ನವೀನ್ ಎಂಬ ಇಬ್ಬರು ಕಳ್ಳರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದರು. ತಾವು ಅನುಭವಿಸಿದ ನಷ್ಟ ಮತ್ತು ತೊಂದರೆಯಿಂದ ತೀವ್ರ ಸಿಟ್ಟಿಗೆ ಒಳಗಾದ ರೈತರು, ಈ ಕಳ್ಳರಿಗೆ ಸರಿಯಾದ ಪಾಠ ಕಲಿಸಲು ನಿರ್ಧರಿಸಿ ಇಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದರು.
ನಂತರ, ರೈತರು ಕಳ್ಳರನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದರು. ಈ ಸಂಬಂಧ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ ಹಾವಳಿ ಇಡ್ತವ್ರೆ ಕೇರಳಾ ಪೆಡ್ಲರ್ಸ್ – ಪ್ಲಂಬಿಂಗ್ ಕೆಲ್ಸಾ ಬಿಟ್ಟಾ ಬಂಗಿ ನೆಟ್ಟ!







