ನೆಲಮಂಗಲದಲ್ಲಿ 25 ಕೋಟಿ ಮೌಲ್ಯದ ಭೂ ಹಗರಣ – ಸಬ್ ರಿಜಿಸ್ಟ್ರಾರ್ ಸತೀಶ್ ಕುಮಾರ್ ಕಿಂಗ್ ಪಿನ್ .. ಎಸ್ಕೇಪ್!

ನೆಲಮಂಗಲ : ಕಡಿಮೆ ಬೆಲೆಗೆ ಚಿನ್ನದಂತಹ ಭೂಮಿ ಬೇಕೇ, ನಿಮ್ಮ ಬಳಿ ₹1 ಕೋಟಿ ಇದ್ದರೆ ಸಾಕು, ಹತ್ತಾರು ಕೋಟಿ ಮೌಲ್ಯದ ಜಮೀನು ನಿಮ್ಮದಾಗಿಸಬಹುದು.  ನೆಲಮಂಗಲ ತಾಲೂಕು ಸಬ್ ರಿಜಿಸ್ಟ್ರಾರ್ ಡಿ.ಪಿ. ಸತೀಶ್ ಕುಮಾರ್ ನಡೆಸುತ್ತಿದ್ದ ಅಕ್ರಮವಾಗಿದೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಅಕ್ರಮ ಭೂ ನೋಂದಣಿ ದಂಧೆ ನಡೆಯುತ್ತಿದ್ದು, ಇದಕ್ಕೆ ಸತೀಶ್ ಕುಮಾರ್ ಅವರೇ ಕಿಂಗ್ ಪಿನ್ ಆಗಿದ್ದಾರೆ ಎಂದು ಆರೋಪಿಸಲಾಗಿದೆ.

ಅಧಿಕಾರಿ ಡಿ.ಪಿ. ಸತೀಶ್ ಕುಮಾರ್‌ಗೆ ಹಣ ನೀಡಿದರೆ ಸಾಕು, ಯಾವುದೇ ವ್ಯಕ್ತಿಯ ಆಸ್ತಿಯನ್ನು ಇನ್ನೊಬ್ಬರ ಹೆಸರಿಗೆ ಅಕ್ರಮವಾಗಿ ನೋಂದಾಯಿಸಿ ಕೊಡುತ್ತಿದ್ದ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನೆಲಮಂಗಲ ತಾಲೂಕಿನ ಮಾಚನಹಳ್ಳಿ ಭೂಮಿ ಪರಭಾರೆ ಹಗರಣದಲ್ಲಿ ಸತೀಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದು, ದಾಖಲೆಗಳಿಲ್ಲದ 8 ಎಕರೆ ಜಮೀನನ್ನು ಅಕ್ರಮವಾಗಿ ನೋಂದಾಯಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಈ ಅಕ್ರಮಗಳನ್ನು ಅವರು ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯ ಪೇದೆ ಗಿರಿಜೇಶ್ ಅವರೊಂದಿಗೆ ಸೇರಿ ನಡೆಸುತ್ತಿದ್ದರು.

ಈ ಅಕ್ರಮಗಳಲ್ಲಿ ಅತ್ಯಂತ ಗಂಭೀರವಾದ ಅಂಶವೆಂದರೆ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಈಗಾಗಲೇ ಭೂ ಸ್ವಾಧೀನ ಮಾಡಿಕೊಂಡಿದ್ದ ಜಮೀನುಗಳನ್ನೂ ಸಹ ನೋಂದಾಯಿಸಿರುವುದು. ಕಾನೂನಿನ ಪ್ರಕಾರ, ಸರ್ಕಾರಿ ಸಂಸ್ಥೆ ಭೂ ಸ್ವಾಧೀನ ಮಾಡಿದ ನಂತರ, ಸರ್ಕಾರದ ಅನುಮತಿಯಿಲ್ಲದೆ ಆಸ್ತಿಯನ್ನು ನೋಂದಾಯಿಸುವಂತಿಲ್ಲ. ಆದರೂ, ಸತೀಶ್ ಕುಮಾರ್ ಅವರು ಈ ನಿಯಮವನ್ನು ಉಲ್ಲಂಘಿಸಿ ಅಕ್ರಮವಾಗಿ ನೋಂದಣಿ ಮಾಡಿದ್ದಾರೆ.

ಸಬ್ ರಿಜಿಸ್ಟ್ರಾರ್ ಡಿ.ಪಿ. ಸತೀಶ್ ಕುಮಾರ್ ಮತ್ತು ಪೇದೆ ಗಿರಿಜೇಶ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಇಬ್ಬರೂ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಕಳೆದ 6 ದಿನಗಳಿಂದ ಸಬ್ ರಿಜಿಸ್ಟ್ರಾರ್ ಸತೀಶ್ ಕುಮಾರ್ ಕಚೇರಿಗೆ ಹಾಜರಾಗದಿರುವುದರಿಂದ ನೋಂದಣಿ ಕಾರ್ಯಗಳು ಸ್ಥಗಿತಗೊಂಡಿವೆ. ಇದರಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಸತೀಶ್ ಕುಮಾರ್ ಅವರನ್ನು ಕೂಡಲೇ ಅಮಾನತುಗೊಳಿಸಿ, ಬಡವರ ಆಸ್ತಿಗಳನ್ನು ರಕ್ಷಿಸುವಂತೆ ಸ್ಥಳೀಯ ಸಾರ್ವಜನಿಕರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಹೆಚ್​ಡಿಕೆ ಹುಟ್ಟುಹಬ್ಬದ ಪ್ರಯುಕ್ತ ಟಿ. ದಾಸರಹಳ್ಳಿಯ ವಿಶಾಲ್‌ ಶಾಲಾ ಮಕ್ಕಳಿಗೆ ಭಗವದ್ಗೀತೆ ಪುಸ್ತಕ ವಿತರಣೆ!

Btv Kannada
Author: Btv Kannada

Read More