ಬೆಂಗಳೂರು : ಬೆಂಗಳೂರಿನಲ್ಲಿ ಪೊಲೀಸರ ಹಣದ ದಾಹಕ್ಕೆ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ವೀಕೆಂಡ್ ಪಾರ್ಟಿ ಮಾಡುತ್ತಿದ್ದ ಯುವಕ-ಯುವತಿಯರ ಬಳಿ HAL ಠಾಣೆಯ ಪೊಲೀಸರು ಲಂಚ ಕೇಳಿದ್ದರಿಂದ ಹೆದರಿದ 21 ವರ್ಷದ ವೈಷ್ಣವಿ ಎಂಬ ಯುವತಿ ಹೋಟೆಲ್‌ನಿಂದ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಸದ್ಯ ಯುವತಿ ಸಾವು-ಬದುಕಿನ ಸ್ಥಿತಿಯಲ್ಲಿದ್ದು, ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
HALನ ಎಇಸಿಎಸ್ ಲೇಔಟ್ನಲ್ಲಿರುವ ಹೊಟೇಲ್ನಲ್ಲಿ ಕುಂದಲಹಳ್ಳಿ ನಿವಾಸಿ ವೈಷ್ಣವಿ ತನ್ನ ಎಂಟು ಸ್ನೇಹಿತರೊಂದಿಗೆ ವೀಕೆಂಡ್ ಪಾರ್ಟಿಗಾಗಿ ಮೂರು ರೂಂಗಳನ್ನು ಬುಕ್ ಮಾಡಿದ್ದರು. ಮೋಜು ಮಸ್ತಿಯಲ್ಲಿರುವಾಗಲೇ ಇದ್ದಕ್ಕಿದ್ದಂತೆ HAL ಠಾಣೆಯ ಪೊಲೀಸರು ಎಂಟ್ರಿ ಕೊಟ್ಟರು. ಪೊಲೀಸರು ಯುವಕ-ಯುವತಿಯರೊಂದಿಗೆ ಗಲಾಟೆ ಮಾಡಿ, ಪಾರ್ಟಿ ಮಾಡ್ತಿದ್ದೀರಾ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ ಎನ್ನಲಾಗಿದೆ. ಈ ವೇಳೆ, ಪಾರ್ಟಿ ಮಾಡುತ್ತಿದ್ದವರ ಬಳಿ ಸ್ಥಳದಲ್ಲೇ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಸ್ನೇಹಿತರು ನೇರ ಆರೋಪ ಮಾಡಿದ್ದಾರೆ. ಹೆದರಿದ ಸ್ನೇಹಿತರು ಫೋನ್‌ಪೇ ಮೂಲಕ ಹಣ ಪಾವತಿಸುವುದಾಗಿ ಹೇಳಿದಾಗ, ಪೊಲೀಸರು ನಮಗೆ ಫೋನ್‌ಪೇ ಬೇಡ, ಕ್ಯಾಶ್ ಬೇಕು ಎಂದು ಹಠ ಹಿಡಿದರು ಎಂದು ಪಾರ್ಟಿ ಸ್ನೇಹಿತರು ಆರೋಪಿಸಿದ್ದಾರೆ.
ಪೊಲೀಸರ ಬ್ಲ್ಯಾಕ್‌ಮೇಲ್ ಹಾಗೂ ಲಂಚದ ಬೇಡಿಕೆಯಿಂದ ವೈಷ್ಣವಿ ತೀವ್ರವಾಗಿ ಹೆದರಿದ್ದಳು. ಪೊಲೀಸರಿಗೆ ಹಣ ತರಲು ಒಬ್ಬ ಸ್ನೇಹಿತ ATMಗೆ ಹೋಗುವುದಾಗಿ ಹೇಳಿ ಹೋಟೆಲ್‌ನಿಂದ ಹೊರಬಂದನು. ಈ ಸಂದರ್ಭದಲ್ಲಿ, ಪೊಲೀಸರ ವಿಚಾರಣೆ ಮತ್ತು ಬ್ಲ್ಯಾಕ್‌ಮೇಲ್‌ಗೆ ಕಂಗಾಲಾದ ವೈಷ್ಣವಿ, ಹೋಟೆಲ್‌ನ ಬಾಲ್ಕನಿಯಿಂದ ಹಾರಿದ್ದಾಳೆ. ಪರಿಣಾಮ, ಆಕೆಯ ತಲೆ, ದೇಹ ಮತ್ತು ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಆಕೆ ಖಾಸಗಿ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ವೈಷ್ಣವಿ ಸ್ಥಿತಿ ಚಿಂತಾಜನಕವಾಗಿದೆ.

ಘಟನೆಯ ಬಳಿಕ HAL ಪೊಲೀಸರ ಸುತ್ತ ಅನುಮಾನದ ಹುತ್ತ ಬೆಳೆದಿದೆ. ವೈಷ್ಣವಿ ಆತ್ಮಹತ್ಯೆ ಯತ್ನಕ್ಕೆ ನಿಜವಾದ ಕಾರಣ ಏನು ಎಂಬ ಪ್ರಶ್ನೆ ಮೂಡಿದೆ. ಪೊಲೀಸರು ಕೇವಲ ಬುದ್ಧಿವಾದ ಹೇಳಿದ್ದಕ್ಕೆ ಈ ದುರಂತ ಸಂಭವಿಸಿದೆಯೇ? ಅಥವಾ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಕ್ಕೆ ಯುವತಿ ಹಾರಿದ್ದಳೇ? ಎಂಬ ಅನುಮಾನ ಕೇಳಿಬಂದಿದೆ. ಈ ನಡುವೆ, ತಮ್ಮ ಮೇಲಿನ ಆರೋಪ ಮುಚ್ಚಿಹಾಕುವ ಪ್ರಯತ್ನದಲ್ಲಿ HAL ಪೊಲೀಸರು, ಹೋಟೆಲ್ ಲಾಡ್ಜ್ ಮಾಲೀಕರ ಮೇಲೆ FIR ದಾಖಲಿಸಿದ್ದಾರೆ. ಯುವತಿಯ ತಂದೆ ಆ್ಯಂಟನಿ ಅವರ ದೂರಿನ ಮೇರೆಗೆ ಹೋಟೆಲ್ ಬಾಲ್ಕನಿಯಲ್ಲಿ ಸುರಕ್ಷತೆ ವಹಿಸದೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಹೋಟೆಲ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹೋಟೆಲ್ ಸುತ್ತಮುತ್ತ ಹಲವು ಅನುಮಾನಗಳು ಕೇಳಿಬಂದಿವೆ. ಸ್ಥಳೀಯರು ‘ಸೀ ಎಸ್ಟಾ’ ಹೋಟೆಲ್ ಬಗ್ಗೆ ಗಂಭೀರ ಆರೋಪ ಮಾಡಿ, ಇಲ್ಲಿ ಪ್ರತಿದಿನ ಗಾಂಜಾ ಹಾಗೂ ಡ್ರಗ್ಸ್ ಸರಬರಾಜು ಮತ್ತು ನಶೆಯ ಪಾರ್ಟಿಗಳು ನಡೆಯುತ್ತಿದ್ದವು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇತ್ತ, ಗಂಭೀರವಾಗಿ ಗಾಯಗೊಂಡಿರುವ ವೈಷ್ಣವಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾಳೆ. HAL ಪೊಲೀಸರ ಸುತ್ತ ಕೇಳಿಬಂದಿರುವ ಲಂಚ ಹಾಗೂ ಬ್ಲ್ಯಾಕ್‌ಮೇಲ್ ಆರೋಪಗಳ ಬಗ್ಗೆ HAL ಠಾಣೆಯಲ್ಲಿ FIR ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ದೆಹಲಿಯಲ್ಲಿ ದಟ್ಟ ಮಂಜು – ಇಂಡಿಗೋ ವಿಮಾನದಲ್ಲಿ ರಾಜ್ಯದ 21 ಶಾಸಕರು ಲಾಕ್!







