ನವದೆಹಲಿ : ದಟ್ಟವಾದ ಹೊಗೆ- ಮಂಜು ಕವಿದ ಪರಿಣಾಮ ಕರ್ನಾಟಕದ 21 ಶಾಸಕರು ಪ್ರಯಾಣಿಸಬೇಕಿದ್ದ ಇಂಡಿಗೋ ವಿಮಾನ ನವದೆಹಲಿಯಲ್ಲಿ ಹಾರಾಟ ಆರಂಭಿಸದೆ ನಾಲ್ಕಾರು ಗಂಟೆಗಳಿಂದ ಬಾಕಿಯಾಗಿದೆ. ಶಾಸಕರು ವಿಮಾನದ ಒಳಗಡೆಯೇ ಸಿಲುಕಿದ್ದಾರೆ.
ಭಾನುವಾರ ಆಯೋಜನೆಗೊಂಡಿದ್ದ ವೋಟ್ ಚೋರಿ ಸಮಾವೇಶಕ್ಕೆ ಮಂತ್ರಿಗಳು, ಕಾಂಗ್ರೆಸ್ ಶಾಸಕರು ದೆಹಲಿಗೆ ಆಗಮಿಸಿದ್ದರು. ಇಂದು ದಾವಣಗೆರೆಯಲ್ಲಿ ನಡೆಯಲಿರುವ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ದೆಹಲಿಯಿಂದ ಬೆಳಗಾವಿಗೆ ಹೋಗುವ ವಿಮಾನ ಏರಿದ್ದರು.
ಶಾಸಕರ ವಿಮಾನ ಬೆಳಗ್ಗೆ 5:30ಕ್ಕೆ ದೆಹಲಿಯಿಂದ ಹೊರಡಬೇಕಿತ್ತು. ವಿಮಾನದ ಒಳಗಡೆ ಕುಳಿತುಕೊಂಡ ಬಳಿಕ ದಟ್ಟವಾದ ಹೊಗೆಯಿಂದಾಗಿ ವಿಮಾನ ಟೇಕಾಫ್ ಆಗಿಲ್ಲ. ಸುಮಾರು 4 ಗಂಟೆಯಿಂದ ಶಾಸಕರು ವಿಮಾನದಲ್ಲೇ ಕುಳಿತಿದ್ದು ಬೆಳಗ್ಗೆ 10 ಗಂಟೆಯಾದರೂ ವಿಮಾನ ಟೇಕಾಫ್ ಅಗಿಲ್ಲ. ವಿಮಾನ ಎಷ್ಟು ಗಂಟೆಗೆ ಟೇಕಾಫ್ ಆಗಲಿದೆ ಎಂಬ ಮಾಹಿತಿಯನ್ನು ಸಿಬ್ಬಂದಿ ನೀಡಿಲ್ಲ. ದೆಹಲಿಯಲ್ಲಿ ಹವಾಮಾನ ವೈಪರೀತ್ಯದಿಂದ ವಿಮಾನಗಳ ಟೇಕಾಫ್ ಮತ್ತು ಲ್ಯಾಂಡಿಂಗ್‌ಗೆ ಸಮಸ್ಯೆಯಾಗಿದೆ.
ಲಕ್ಷ್ಮೀ ಹೆಬಾಳ್ಕರ್, ಕೆಜೆ ಜಾರ್ಜ್, ಕೋನರೆಡ್ಡಿ, ಬಸನಗೌಡ ಬಾದರ್ಲಿ, ಆನಂದ್ ಗಡದೇವರಮಠ, ಹೆಚ್‌ಕೆ ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ರಾಜು ಗೌಡ, ಸಲೀಂ ಅಹಮದ್, ತನ್ವೀರ್ ಸೇಠ್, ಸತೀಶ್ ಜಾರಕಿಹೊಳಿ, ಜಿ ಎಸ್ ಪಾಟೀಲ್, ಮಾಲೀಕಯ್ಯ ಗುತ್ತೇದಾರ್, ಈಶ್ವರ್ ಖಂಡ್ರೆ, ಜೆ ಟಿ ಪಾಟೀಲ್, ತಿಪ್ಪಣ್ಣ ಕಾಮಕನೂರ್, ನಾಗೇಂದ್ರ, ಎಂ ಬಿ ಪಾಟೀಲ್, ಅಲ್ಲಮಪ್ರಭು, ರೆಹಮಾನ್ ಖಾನ್, ಮುಂತಾದವರು ಈ ವಿಮಾನದಲ್ಲಿದ್ದಾರೆ.
ಇದನ್ನೂ ಓದಿ : ಅವಧಿ ಮೀರಿ ಪಬ್ ಓಪನ್ – ಶಿಲ್ಪಾ ಶೆಟ್ಟಿ ಒಡೆತನದ ಬ್ಯಾಸ್ಟಿನ್ ಪಬ್ ಮೇಲೆ FIR!







