ಪೃಥ್ವಿ ಅಂಬಾರ್-ಧನ್ಯಾ ರಾಮ್ ಕುಮಾರ್ ನಟನೆಯ ‘ಚೌಕಿದಾರ್’ ಸಿನಿಮಾದ 3ನೇ ಸಾಂಗ್ ರಿಲೀಸ್!

ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ‌ ಧನ್ಯ ರಾಮ್ ಕುಮಾರ್ ನಟನೆಯ ಚೌಕಿದಾರ್ ಸಿನಿಮಾದ ಮೂರನೇ ಹಾಡು ಬಿಡುಗಡೆಯಾಗಿದೆ. ಈ ಹಿಂದೆ ರಿಲೀಸ್ ಆಗಿದ್ದ ಎರಡು ಹಾಡುಗಳಿಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಇದೀಗ ಚಿತ್ರತಂಡ ಇಷ್ಟ ಆದೆ‌ ನೀನು ಎಂಬ ಮೆಲೋಡಿ ಗೀತೆಯನ್ನು ಅನಾವರಣ ಮಾಡಿದೆ. ಎಂಟಿಆರ್ ಮ್ಯೂಸಿಕ್ ಯೂಟ್ಯೂಬ್​ನಲ್ಲಿ ಬಿಡುಗಡೆಯಾಗಿರುವ ಇಷ್ಟ ಆದೆ‌ ನೀನು ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ಒದಗಿಸುವುದರ ಜೊತೆಗೆ ಪೃಥ್ವಿ ಭಟ್ ಜೊತೆಗೂಡಿ ಧ್ವನಿಯಾಗಿದ್ದಾರೆ.

ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ ಬಂಡಿಯಪ್ಪ ಕಥೆ ಬರೆದು ಚೌಕಿದಾರ್ ಸಿನಿಮಾವನ್ನು ನಿರ್ದೇಶನ‌ ಮಾಡಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟಿ ಶ್ವೇತಾ, ಸುಧಾರಾಣಿ, ಧರ್ಮ, ಬಿಗ್ ಬಾಸ್ ಖ್ಯಾತಿಯ ಗಿಲ್ಲಿ ನಟ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ.

ವಿ ಎಸ್ ಎಂಟರ್ಟೈನ್ಮೆಂಟ್ ಬ್ಯಾನರ್‌ನಡಿ ಕಲ್ಲಹಳ್ಳಿ ಚಂದ್ರಶೇಖರ್ ನಿರ್ಮಾಣ ಮಾಡಿದ್ದಾರೆ. ವಿದ್ಯಾದೇವಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ‘ಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಯಾವುದೋ ಹೊಸ ಕಥೆಯನ್ನು ಹೇಳಲು ಸಜ್ಜಾಗಿದ್ದಾರೆ.

ಚೌಕಿದಾರ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ ಚಿತ್ರದ ಬಿಡುಗಡೆ ದಿನಾಂಕವನ್ನು ಚಿತ್ರರಂಗದ ಖ್ಯಾತ ತಾರೆಯೊಬ್ಬರು ಬಿಡುಗಡೆ ಮಾಡಲಿದ್ದಾರೆ.

ಇದನ್ನೂ ಓದಿ : ನಡುರಸ್ತೆಯಲ್ಲೇ ಹೊತ್ತಿ ಉರಿದ ಪ್ರವಾಸಿ ಬಸ್ – ತಪ್ಪಿದ ಭಾರೀ ದುರಂತ!

Btv Kannada
Author: Btv Kannada

Read More