ಬೆಂಗಳೂರು : ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ನಿಧನರಾಗಿದ್ದು, ಅವರ ಅಗಲಿಕೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ ಗೌರವಾರ್ಥವಾಗಿ ಇಂದು ದಾವಣಗೆರೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಇಂದು ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ. ಈ ರಜೆಯನ್ನು ಮುಂದಿನ ಶನಿವಾರ ಅಂದರೆ ಡಿ. 27ರಂದು ಪೂರ್ಣ ದಿನ ಶಾಲೆಯನ್ನು ನಡೆಸಿ ಸರಿದೂಗಿಸಲು ತಿಳಿಸಲಾಗಿದೆ.
ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ : ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ. ಮೊದಲು ಹಿರಿಯ ಪುತ್ರ S.S ಬಕ್ಕೇಶ್ ಮನೆಯಲ್ಲಿ ಓಂಕಾರೇಶ್ವರ ಶಿವಾಚಾರ್ಯ ಶ್ರೀ, ಕಣವಕೊಪ್ಪ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ನಡೆಯಲಿದೆ. ನಂತರ ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ನಿವಾಸದಲ್ಲಿ ಪೂಜೆ ಸಲ್ಲಿಕೆ ಮಾಡಿ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಿವಾಸದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 11.30ರವರೆಗೆ ಪಾರ್ಥಿವ ಶರೀರಕ್ಕೆ ಪೂಜೆ &ಕುಟುಂಬಸ್ಥರಿಗೆ ದರ್ಶನ ನೀಡಲಾಗುತ್ತದೆ.
ಮಧ್ಯಾಹ್ನ 12 ಗಂಟೆ ನಂತರ ಪಿ.ಜೆ.ಬಡಾವಣೆಯಲ್ಲಿರುವ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತದೆ. ಸಂಜೆ 4.30ರ ಸುಮಾರಿಗೆ ಪಾರ್ಥಿವ ಶರೀರ ಕಲ್ಲೇಶ್ವರ ಮಿಲ್ ತಲುಪಲಿದೆ. ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಭಾರೀ ಚಳಿ – 9 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ!







