ಶಾಮನೂರು ಶಿವಶಂಕರಪ್ಪ ನಿಧನ – ಇಂದು ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ!

ಬೆಂಗಳೂರು: ಕಾಂಗ್ರೆಸ್‌ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ (94) ಅವರು ನಿನ್ನೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರು ಕಳೆದ ಒಂದು ತಿಂಗಳಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.

ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಆ್ಯಂಬುಲೆನ್ಸ್‌ನಲ್ಲಿ ದಾವಣಗೆರೆಯ ನಿವಾಸಕ್ಕೆ ಸ್ಥಳಾಂತರ ಮಾಡಲಾಗಿದ್ದು, ಮೊದಲು ಹಿರಿಯ ಪುತ್ರ S.S ಬಕ್ಕೇಶ್ ಮನೆಯಲ್ಲಿ ಓಂಕಾರೇಶ್ವರ ಶಿವಾಚಾರ್ಯ ಶ್ರೀ, ಕಣವಕೊಪ್ಪ ಸ್ವಾಮೀಜಿ ನೇತೃತ್ವದಲ್ಲಿ ಪಾರ್ಥಿವ ಶರೀರಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ದ್ವಿತೀಯ ಪುತ್ರ ಎಸ್.ಎಸ್.ಗಣೇಶ್ ನಿವಾಸದಲ್ಲಿ ಪೂಜೆ ಸಲ್ಲಿಕೆ ಮಾಡಿ, ಸಚಿವ ಎಸ್.ಎಸ್‌.ಮಲ್ಲಿಕಾರ್ಜುನ್ ನಿವಾಸದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಬೆಳಗ್ಗೆ 11.30ರವರೆಗೆ ಪಾರ್ಥಿವ ಶರೀರಕ್ಕೆ ಪೂಜೆ &ಕುಟುಂಬಸ್ಥರಿಗೆ ದರ್ಶನ ನೀಡಲಾಗುತ್ತದೆ. ವೀರಶೈವ ಲಿಂಗಾಯತ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಲಿದೆ.

ಮಧ್ಯಾಹ್ನ 12 ಗಂಟೆ ನಂತರ ಪಿ.ಜೆ‌.ಬಡಾವಣೆಯಲ್ಲಿರುವ ಹೈಸ್ಕೂಲ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಸಕಲ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 ಗಂಟೆಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ದಾವಣಗೆರೆಯ ಪ್ರಮುಖ ಬೀದಿಗಳಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಮಾಡಲಾಗುತ್ತದೆ. ಸಂಜೆ 4.30ರ ಸುಮಾರಿಗೆ ಪಾರ್ಥಿವ ಶರೀರ ಕಲ್ಲೇಶ್ವರ ಮಿಲ್ ತಲುಪಲಿದೆ. ಸಂಜೆ 5 ಗಂಟೆ ಸುಮಾರಿಗೆ ಪತ್ನಿ ಪಾರ್ವತಮ್ಮ ಅವರ ಸಮಾಧಿ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಯಲಿದೆ.

ಇನ್ನು ಶಾಮನೂರು ಅವರ ಅಗಲಿಕೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಇಂದು ದಾವಣಗೆರೆ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಇದನ್ನೂ ಓದಿ : ಜೀವ ಭಯ ತೊರೆದು ಸ್ಫೋಟಕಗಳ ಮೇಲೆಯೇ ಕುಳಿತ ರೈತರು – ಮಂಡ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ!

Btv Kannada
Author: Btv Kannada

Read More