ಜೀವ ಭಯ ತೊರೆದು ಸ್ಫೋಟಕಗಳ ಮೇಲೆಯೇ ಕುಳಿತ ರೈತರು – ಮಂಡ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ!

ಮಂಡ್ಯ : ದಿನದಿಂದ ದಿನಕ್ಕೆ ಮಿತಿಮೀರುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶ್ರೀರಂಗಪಟ್ಟಣ ತಾಲ್ಲೂಕಿನ ನೀಲಕೊಪ್ಪಲು ಗ್ರಾಮದಲ್ಲಿ ತಮ್ಮ ಜಮೀನು ಕಸಿದುಕೊಂಡು ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ, ಪರಿಶಿಷ್ಟ ಜಾತಿ (SC) ಸಮುದಾಯಕ್ಕೆ ಸೇರಿದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳ ರೈತರು ಅಸಾಮಾನ್ಯ ಪ್ರತಿಭಟನೆ ನಡೆಸಿದ್ದಾರೆ.

ಗಣಿಗಾರಿಕೆ ಮಾಲೀಕರ ದೌರ್ಜನ್ಯದಿಂದ ಬೇಸತ್ತ ಗ್ರಾಮದ ರೈತರು ಜೀವದ ಹಂಗು ತೊರೆದು ಪ್ರತಿಭಟಿಸಿದ್ದು, ಇದು ಇಡೀ ಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಗಣಿಗಾರಿಕೆಗಾಗಿ ತಮ್ಮ ಜಮೀನಿನಲ್ಲಿ ಬಂಡೆ ಸಿಡಿಸಲು ಅಳವಡಿಸಿದ್ದ ಸ್ಫೋಟಕಗಳ (Explosives) ಮೇಲೆಯೇ ರೈತರು ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಪಕ್ಕದಲ್ಲೇ ಅಳವಡಿಸಿದ್ದ ಈ ಸ್ಫೋಟಕಗಳು ಯಾವುದೇ ಕ್ಷಣದಲ್ಲಿ ಸಿಡಿದರೂ ಅಪಾಯ ಖಚಿತ ಎಂದು ತಿಳಿದಿದ್ದರೂ, ಅಕ್ರಮದ ವಿರುದ್ಧ ಹೋರಾಟದ ತೀವ್ರತೆ ತೋರಿಸಲು ರೈತರು ಈ ಸಾಹಸಕ್ಕೆ ಮುಂದಾಗಿದ್ದಾರೆ.

ನೀಲಕೊಪ್ಪಲು ಗ್ರಾಮದ ಸರ್ವೇ ನಂಬರ್ 18 ರಲ್ಲಿ ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬುದು ರೈತರ ಮುಖ್ಯ ಆರೋಪ. ಅಕ್ರಮ ಗಣಿಗಾರಿಕೆ ಮಾಲೀಕರು ತಮ್ಮ ಪ್ರಭಾವ ಬಳಸಿ ರೈತರ ಜಮೀನುಗಳನ್ನು ಅತಿಕ್ರಮಣ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದಾರೆ. ಪರಿಣಾಮವಾಗಿ, ಈ ಭಾಗದ ಹಲವಾರು ರೈತ ಕುಟುಂಬಗಳು ತಮ್ಮ ಜೀವನೋಪಾಯದ ಜಮೀನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ.

ಪ್ರತಿಭಟನಾ ನಿರತ ರೈತರು, ನಮ್ಮ ಜಮೀನನ್ನು ಉಳಿಸಿಕೊಳ್ಳಲು ಮತ್ತು ಅಕ್ರಮ ಗಣಿಗಾರಿಕೆಯನ್ನು ನಿಲ್ಲಿಸಲು ಈ ಹೋರಾಟ ನಡೆಸುತ್ತಿದ್ದೇವೆ. ಪ್ರಭಾವಿಗಳ ದಬ್ಬಾಳಿಕೆಯಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೇವೆ. ನಮ್ಮ ಹೋರಾಟಕ್ಕೆ ನ್ಯಾಯ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಕಡಿಮೆ ದರಕ್ಕೆ ಚಿನ್ನದ ನಾಣ್ಯದ ಆಮಿಷ – ನಕಲಿ ಗೋಲ್ಡ್ ಗ್ಯಾಂಗ್ ಬಂಧನ, 5.90 ಲಕ್ಷ ನಗದು ಜಪ್ತಿ!

Btv Kannada
Author: Btv Kannada

Read More