ದಾವಣಗೆರೆ : ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಆಮಿಷವೊಡ್ಡಿ ಜನರಿಗೆ ವಂಚಿಸುತ್ತಿದ್ದ ನಕಲಿ ಗೋಲ್ಡ್ ಗ್ಯಾಂಗ್‌ನ ಇಬ್ಬರು ಪ್ರಮುಖ ಆರೋಪಿಗಳನ್ನು ದಾವಣಗೆರೆಯ ಹೊನ್ನಾಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಬರೋಬ್ಬರಿ ₹ 5.90 ಲಕ್ಷ ನಗದು, ಮೊಬೈಲ್ ಮತ್ತು ಕೃತ್ಯಕ್ಕೆ ಬಳಸಿದ್ದ ವಾಹನವನ್ನು ಜಪ್ತಿ ಮಾಡಲಾಗಿದೆ.

ಪೊಲೀಸರು ಬಂಧಿಸಿರುವ ಆರೋಪಿಗಳು ಶಿವಮೊಗ್ಗದ ಪರಶುರಾಮ ಮತ್ತು ಮನೋಜ್. ಈ ಇಬ್ಬರೂ ರಾಜ್ಯದ ಹಲವೆಡೆ ಇದೇ ಮಾದರಿಯಲ್ಲಿ ವಂಚಿಸುತ್ತಿದ್ದರು. ಆರೋಪಿಗಳು ಮೊದಲು ವಿಶ್ವಾಸ ಗಳಿಸಲು ಒಂದು ಅಸಲಿ ಚಿನ್ನದ ನಾಣ್ಯ ನೀಡಿ ಜನರನ್ನು ನಂಬಿಸುತ್ತಿದ್ದರು. ನಂತರ ಕಡಿಮೆ ಬೆಲೆಗೆ ಹೆಚ್ಚು ನಾಣ್ಯ ನೀಡುವ ಆಮಿಷವೊಡ್ಡಿ, ಹಣ ಪಡೆದು ನಕಲಿ ನಾಣ್ಯಗಳನ್ನು ಕೊಟ್ಟು ಪರಾರಿಯಾಗುತ್ತಿದ್ದರು.
ಇತ್ತೀಚೆಗೆ, ಆರೋಪಿಗಳು ಮಂಡ್ಯ ಜಿಲ್ಲೆಯ ಕುಂದೂರು ಗ್ರಾಮದ ಮೂರ್ತಿ ಎಂಬುವವರಿಗೆ ಇದೇ ರೀತಿ ವಂಚಿಸಿದ್ದರು. ಆರಂಭದಲ್ಲಿ ಒಂದು ಅಸಲಿ ನಾಣ್ಯ ನೀಡಿ ವಿಶ್ವಾಸ ಗಳಿಸಿದ್ದರು. ಆದರೆ, ಚಿನ್ನದ ನಾಣ್ಯ ಖರೀದಿಯ ಪ್ರಮುಖ ವ್ಯವಹಾರದ ವೇಳೆ, ಮೂರ್ತಿ ಅವರಿಗೆ ನಕಲಿ ನಾಣ್ಯ ನೀಡಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿತ್ತು.

ಈ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತಕ್ಷಣ ತನಿಖೆ ಕೈಗೊಂಡರು. ಸುಳಿವುಗಳನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಹೊನ್ನಾಳಿ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ KSRTC ಬಸ್‌ನಿಂದ ಭೀಕರ ಅಪಘಾತ – ಇಬ್ಬರಿಗೆ ಗಂಭೀರ ಗಾಯ!







