ಉಡುಪಿ : ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬಹು ನಿರೀಕ್ಷಿತ ಶೀರೂರು ಪರ್ಯಾಯ ಮಹೋತ್ಸವಕ್ಕೆ ಸಿದ್ಧತೆಗಳು ಅಂತಿಮ ಹಂತ ತಲುಪಿವೆ. ಜನವರಿ 18 ರಂದು ಅದ್ದೂರಿಯಾಗಿ ನಡೆಯಲಿರುವ ಈ ಪರ್ಯಾಯವು ಶ್ರೀ ವೇದವರ್ಧನ ತೀರ್ಥರವರ ಮೊದಲ ಪರ್ಯಾಯವಾಗಿದ್ದು, ಈ ಅದ್ದೂರಿ ಪರ್ಯಾಯಕ್ಕೆ ಪೂರ್ವಭಾವಿಯಾಗಿ ಇಂದು ಧಾನ್ಯ ಮುಹೂರ್ತವು ಸಂಪನ್ನಗೊಂಡಿತು.

ಪರ್ಯಾಯದ ಪ್ರಮುಖ ಆಚರಣೆಗಳಲ್ಲಿ ಒಂದಾದ ‘ಧಾನ್ಯ ಮುಹೂರ್ತ’, ಭಕ್ತರ ಊಟೋಪಚಾರಕ್ಕೆ ಬೇಕಾದ ಧಾನ್ಯ ಸಂಗ್ರಹಕ್ಕೆ ಚಾಲನೆ ನೀಡುವ ಶತಮಾನಗಳ ಇತಿಹಾಸವುಳ್ಳ ಸಂಪ್ರದಾಯವಾಗಿದೆ. ಧಾನ್ಯ ಮುಹೂರ್ತದ ಅಂಗವಾಗಿ, ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಾಂಪ್ರದಾಯಿಕ ವೇಷಭೂಷಣದೊಂದಿಗೆ ಅಕ್ಕಿಯ ಮುಡಿಯನ್ನು ತಲೆಯ ಮೇಲೆ ಹೊತ್ತು ರಥಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಿದರು.

ಮೆರವಣಿಗೆ ಬಳಿಕ ಶ್ರೀಗಳು ಮೊದಲು ಶ್ರೀ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ, ಅನಂತೇಶ್ವರ ಮತ್ತು ಚಂದ್ರಮೌಳೇಶ್ವರ ದೇವರುಗಳ ದರ್ಶನ ಪಡೆದು ಕೃಷ್ಣ ಮಠದ ಆಚಾರ-ವಿಚಾರಗಳನ್ನು ಮುಂದುವರಿಸಿದರು. ಧಾರ್ಮಿಕ ವಿಧಿವಿಧಾನಗಳ ಬಳಿಕ, ಮಠದ ಬಡಗು ಮಾಳಿಗೆಯಲ್ಲಿ ಭತ್ತ ಸಂಗ್ರಹಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಇನ್ನು ಮುಂದಿನ ದಿನಗಳಲ್ಲಿ ಭಕ್ತರು ಪರ್ಯಾಯ ಮಹೋತ್ಸವಕ್ಕೆ ಧಾನ್ಯಗಳನ್ನು ಸಮರ್ಪಿಸಲಿದ್ದಾರೆ.

ಪರ್ಯಾಯ ಪೂರ್ವಭಾಗಿ ಈ ಧಾನ್ಯ ಮುಹೂರ್ತ ಮಹೋತ್ಸವದಲ್ಲಿ ಕರಾವಳಿ ಭಾಗದ ಹಲವು ಪ್ರಮುಖ ಧಾರ್ಮಿಕ ಮುಖಂಡರು, ಮಠಾಧೀಶರು, ಮತ್ತು ರಾಜಕಾರಣಿಗಳು ಭಾಗಿಯಾಗಿ ಶ್ರೀಗಳಿಗೆ ಶುಭ ಕೋರಿದರು.
ಇದನ್ನೂ ಓದಿ : ಬಾಗಲಕೋಟೆಯಲ್ಲಿ KSRTC ಬಸ್‌ನಿಂದ ಭೀಕರ ಅಪಘಾತ – ಇಬ್ಬರಿಗೆ ಗಂಭೀರ ಗಾಯ!







