ಬೆಂಗಳೂರು : ನಕಲಿ ಪೊಲೀಸ್ ಉಪನಿರೀಕ್ಷಕ (PSI) ಎಂದು ಸೋಗು ಹಾಕಿ ಮನೆಗೆ ನುಗ್ಗಿ, ಬೆದರಿಸಿ ದರೋಡೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್‌ನ ಮಲ್ಲಿಕಾರ್ಜುನ್ (ನಕಲಿ PSI), ಪ್ರಮೋದ್, ವಿನಯ್ ಮತ್ತು ಹೃತ್ವಿಕ್ ಎಂಬ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ.

ಪ್ರಮುಖ ಆರೋಪಿ ಮಲ್ಲಿಕಾರ್ಜುನ್, PSI ಆಗಬೇಕೆಂದು ಎರಡು ಬಾರಿ ಪರೀಕ್ಷೆ ಬರೆದು ವಿಫಲನಾಗಿದ್ದ. ಆದರೂ, ಆತ ಸ್ವಂತ ಊರು ಸಿರಗುಪ್ಪದಲ್ಲಿ ತಾನು ಬೆಂಗಳೂರಿನಲ್ಲಿ PSI ಆಗಿರುವುದಾಗಿ ಸುಳ್ಳು ಹೇಳಿ ಬಿಲ್ಡಪ್ ಕೊಟ್ಟಿದ್ದ. ಇದಕ್ಕಾಗಿ ಪೊಲೀಸ್ ಯೂನಿಫಾರಂ, ಲಾಠಿ, ಟೋಪಿ ಮತ್ತು ಶೂ ಧರಿಸಿ ಫೋಟೋಶೂಟ್ ಮಾಡಿಸಿದ್ದ. ಐಷಾರಾಮಿ ಜೀವನದ ದುರಾಸೆಯಿಂದ ಆತ ಅಡ್ಡದಾರಿ ಹಿಡಿದಿದ್ದ. ಈ ಕೃತ್ಯಕ್ಕೆ ಆತನ ಸಹಚರ ಹೃತ್ವಿಕ್ ಸಾಥ್ ನೀಡಿದ್ದ. ಹೃತ್ವಿಕ್ ನರಸೀಪುರದ ನವೀನ್ ಎಂಬುವವರನ್ನು ಹತ್ತಿರದಿಂದ ಗಮನಿಸಿ, ಅವರ ಮನೆಗೆ ನುಗ್ಗಿದರೆ ಸುಲಭವಾಗಿ ಹಣ ಮತ್ತು ಚಿನ್ನಾಭರಣ ಸಿಗುತ್ತದೆ ಎಂದು ಮಲ್ಲಿಕಾರ್ಜುನನಿಗೆ ತಿಳಿಸಿದ್ದ.

ಯೋಜನೆಯಂತೆ, ಡಿಸೆಂಬರ್ 7ರಂದು ಆರೋಪಿಗಳು ಪೊಲೀಸ್ ಡ್ರೆಸ್‌ನಲ್ಲಿ ನವೀನ್ ಮನೆಗೆ ನುಗ್ಗಿದರು. ನೀನು ಗಾಂಜಾ ಮಾರಾಟ ಮಾಡುತ್ತಿದ್ದೀಯಾ, ಮನೆ ಪರಿಶೀಲಿಸಬೇಕು ಎಂದು ಬೆದರಿಕೆ ಹಾಕಿದರು. ನಂತರ, ನವೀನ್ ಮೇಲೆ ಲಾಠಿ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿ, ಬಂಧಿಸದಿರಲು ಹಣ ನೀಡುವಂತೆ ಧಮಕಿ ಹಾಕಿದರು. ಆರೋಪಿಗಳು ನವೀನ್ ಖಾತೆಯಲ್ಲಿದ್ದ ₹87,000, ಬೀರುವಿನಲ್ಲಿದ್ದ ₹53,000 ಮತ್ತು ಪರ್ಸ್‌ನಲ್ಲಿದ್ದ ₹2,000 ಸೇರಿ ಒಟ್ಟು ₹1,42,000 ಹಣವನ್ನು ದೋಚಿ ಪರಾರಿಯಾಗಿದ್ದಾರೆ.

ದರೋಡೆಗೆ ಒಳಗಾದ ನವೀನ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣದ ಗಂಭೀರತೆ ಅರಿತ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ನಕಲಿ PSI ಮಲ್ಲಿಕಾರ್ಜುನ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ₹45,000 ಹಣ ಮತ್ತು ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿದ್ಯಾರಣ್ಯಪುರ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ : ಶಿಕ್ಷಕನ ಮೇಲೆ ನೈತಿಕ ಪೊಲೀಸ್‌ಗಿರಿ – ಸವಣೂರು ಬಂದ್‌ಗೆ ಕರೆ, 22 ಜನರ ಮೇಲೆ ಪ್ರಕರಣ ದಾಖಲು!







