ಗೋವಾ : ರಾಜಕೀಯ ನಿಪುಣತೆ ಮಾತ್ರವಲ್ಲದೆ, ವೈದ್ಯಕೀಯ ಕೌಶಲ್ಯವನ್ನೂ ಪ್ರದರ್ಶಿಸಿರುವ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಅವರು ಗೋವಾದಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ 30,000 ಅಡಿ ಎತ್ತರದಲ್ಲಿ ಅಮೆರಿಕನ್ ಮಹಿಳೆಯ ಪ್ರಾಣ ಉಳಿಸಿ ಹೀರೋ ಆಗಿ ಮಿಂಚಿದ್ದಾರೆ.

ಗೋವಾದಿಂದ ನವದೆಹಲಿಗೆ ಇಂಡಿಗೋ ವಿಮಾನ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ, ತೀವ್ರ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಅಮೆರಿಕದ ಕ್ಯಾಲಿಫೋರ್ನಿಯಾ ಮೂಲದ ಜೆನ್ನಿ ಎಂಬ ಮಹಿಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ವಿಮಾನದಲ್ಲಿ ತುರ್ತು ಪರಿಸ್ಥಿತಿ ಪ್ರಕಟವಾದ ತಕ್ಷಣ, ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಾಜಿ ಶಾಸಕಿ ಹಾಗೂ ವೈದ್ಯೆಯಾದ ಡಾ. ಅಂಜಲಿ ನಿಂಬಾಳ್ಕರ್ ಅವರು ತಕ್ಷಣವೇ ಸಹಾಯಕ್ಕೆ ಧಾವಿಸಿದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಜೆನ್ನಿ ಅವರ ನಾಡಿಮಿಡಿತ ಪರಿಶೀಲಿಸಿದ ಡಾ. ಅಂಜಲಿ, ಕೂಡಲೇ ಕಾರ್ಡಿಯೋ ಪಲ್ಮನರಿ ರಿಸಸ್ತಿಟೇಶನ್ (CPR) ತುರ್ತು ಚಿಕಿತ್ಸೆ ಆರಂಭಿಸಿದರು. ಅವರ ಸಮಯಪ್ರಜ್ಞೆ ಮತ್ತು ಪರಿಣತಿ ಫಲವಾಗಿ ಸಿಪಿಆರ್ ಚಿಕಿತ್ಸೆಯಿಂದ ಮಹಿಳೆಯ ಆರೋಗ್ಯ ಸುಧಾರಿಸಿ, ಅವರು ಸೀಟಿನಲ್ಲಿ ವಿಶ್ರಾಂತಿ ಪಡೆದರು. ಆದರೆ, ಸುಮಾರು ಅರ್ಧ ಗಂಟೆಯ ನಂತರ ಮತ್ತೆ ಅದೇ ಸಮಸ್ಯೆ ಕಾಣಿಸಿತು. ಎಚ್ಚೆತ್ತ ಡಾ. ಅಂಜಲಿ ಅವರು ರೋಗಿಯ ಪಕ್ಕದಲ್ಲೇ ನಿಂತು, ವಿಮಾನ ಸಿಬ್ಬಂದಿಯ ಸಹಕಾರದೊಂದಿಗೆ ನಿರಂತರ ಚಿಕಿತ್ಸೆ ಮತ್ತು ನಿಗಾ ವಹಿಸಿದರು. ಅವರ ನಿರಂತರ ಪ್ರಯತ್ನದಿಂದ ಅಮೆರಿಕನ್ ಮಹಿಳೆ ಪ್ರಾಣಾಪಾಯದಿಂದ ಪಾರಾದರು.

ವಿಮಾನವು ನವದೆಹಲಿ ವಿಮಾನ ನಿಲ್ದಾಣ ತಲುಪುವ ವೇಳೆಗೆ, ಡಾ. ಅಂಜಲಿ ನಿಂಬಾಳ್ಕರ್ ಅವರು ವಿಮಾನ ಸಿಬ್ಬಂದಿಯೊಂದಿಗೆ ಸಮನ್ವಯ ಸಾಧಿಸಿ, ರನ್‌ವೇನಲ್ಲಿ ಆಂಬುಲೆನ್ಸ್ ಸಿದ್ಧವಿರಿಸಲು ವ್ಯವಸ್ಥೆ ಮಾಡಿದರು. ವಿಮಾನ ಇಳಿಯುತ್ತಿದ್ದಂತೆಯೇ ತಡಮಾಡದೆ ರೋಗಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ : ಜನವರಿ 6ಕ್ಕೆ ಡಿಕೆಶಿ ಸಿಎಂ ಪಟ್ಟಕ್ಕೆ ಏರುವುದು ಫಿಕ್ಸ್ – ಶಾಸಕ ಇಕ್ಬಾಲ್ ಹುಸೇನ್ ಸ್ಫೋಟಕ ಹೇಳಿಕೆ!







