ಬೆಂಗಳೂರು : ಕರ್ನಾಟಕದ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪ ರಾಷ್ಟ್ರ ರಾಜ್ಯಕಾರಣದಲ್ಲಿ ಭಾರೀ ಸದ್ದು ಮಾಡಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ನಡೆಸಿದ್ದು, ಇದೀಗ ಪ್ರಭಾವಿ ನಾಯಕನ ಪಾತ್ರ ಎಸ್‌ಐಟಿ ತನಿಖೆಯಲ್ಲಿ ಸಾಬೀತಾಗಿದೆ ಎಂದು ತಿಳಿದುಬಂದಿದೆ.
ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ, ಎಸ್‌ಐಟಿ ತಂಡ ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಶುಕ್ರವಾರ ಚಾರ್ಜ್‌ಶೀಟ್ ಸಲ್ಲಿಸಿದೆ. ಬಿಜೆಪಿಯ ಮಾಜಿ ಶಾಸಕ ಸುಭಾಷ್ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ಎಸ್‌ಐಟಿ ತಂಡ ರಚಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಬಳಿಕ ಸುಮಾರು 22 ಸಾವಿರ ಪುಟಗಳ ಚಾರ್ಜ್‌ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಮತಗಳ್ಳತನ ಮಾಡಲು ಹಣ ಪಾವತಿ ಮಾಡಿಸಿದ್ದರು ಎಂಬ ಆರೋಪವನ್ನೂ ಚಾರ್ಜ್‌ಶೀಟ್‌ನಲ್ಲಿ ಹೊರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ : 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ನಂತರ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವಿಷಯವನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೂಡ ಪ್ರಸ್ತಾಪಿಸಿ ಆರೋಪ ಮಾಡಿದ್ದರು.
ಇದನ್ನೂ ಓದಿ : ಜನಪ್ರಿಯವಾಗುತ್ತಿದೆ “ಪ್ರೇಮಿ”ಯ ಮೊದಲ ಹಾಡು – ಅಮ್ಮ ಬರೆದ ಕಥೆಗೆ ಮಗನೇ ನಾಯಕ!







