ರಾಯಚೂರು : ರಾಯಚೂರಿನ ಯುವಕ ರಿಷಬ್‌ಗೆ ಸಂಬಂಧಿಸಿದ ಈ ‘ಲವ್, ಸೆಕ್ಸ್, ದೋಖಾ’ ಕಹಾನಿ. MCA ಪದವಿ ಓದಿರುವ ಯುವತಿಯು, B.Com ಪದವೀಧರನಾದ ರಿಷಬ್‌ನ ಬಾಲ್ಯದ ಸ್ನೇಹಿತೆ. ಇವರಿಬ್ಬರೂ ಪ್ರೀತಿಸಿ 2025ರ ಏಪ್ರಿಲ್ 19ರಂದು ಕೊಪ್ಪಳ ಜಿಲ್ಲೆಯ ಕವಲೂರಿನ ದುರ್ಗಮ್ಮ ದೇವಸ್ಥಾನದಲ್ಲಿ ಯಾರಿಗೂ ಹೇಳದೆ ಗುಟ್ಟಾಗಿ ಮದುವೆಯಾಗಿದ್ದರು. ಮದುವೆಗೂ ಮುನ್ನ ಯುವತಿ ಗರ್ಭಿಣಿಯಾಗಿದ್ದಳೆಂದೂ, ಆಕೆಗೆ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪವೂ ರಿಷಬ್ ಮೇಲಿದೆ.

ಮದುವೆಯ ನಂತರ, ಮನೆಯವರನ್ನು ಒಪ್ಪಿಸಿ ಅಧಿಕೃತವಾಗಿ ಕರೆದೊಯ್ಯುವುದಾಗಿ ರಿಷಬ್ ಯುವತಿಗೆ ಹೇಳಿದ್ದನು. ಆದರೆ, ಕೆಲವು ಸಮಯದ ನಂತರ ಆತ ಸಂಪೂರ್ಣವಾಗಿ ಯುವತಿಯ ಸಂಪರ್ಕದಿಂದ ದೂರಾದ. ಮನೆಯಲ್ಲಿ ಬೇರೆಯವರ ಜೊತೆ ಮದುವೆ ಮಾಡುತ್ತಿದ್ದಾರೆ, ನನಗೆ ಇಷ್ಟವಿಲ್ಲ ಎಂದು ಸುಳ್ಳು ಕಥೆ ಹೇಳಿ, ತನ್ನ ಮೊದಲ ಪತ್ನಿಯನ್ನು ನಂಬಿಸಲು ಯತ್ನಿಸಿದ್ದನು.

ಪತಿಯಿಂದ ಸಂಪರ್ಕ ಕಡಿತಗೊಂಡಿದ್ದ ಸಂತ್ರಸ್ತ ಯುವತಿಗೆ ಕೆಲ ದಿನಗಳ ಹಿಂದೆ ಇನ್‌ಸ್ಟಾಗ್ರಾಂನಲ್ಲಿ ಶಾಕ್ ಎದುರಾಗಿದೆ. ರಿಷಬ್ ಮತ್ತೊಬ್ಬ ಯುವತಿಯನ್ನು ವಿವಾಹವಾಗುತ್ತಿರುವ ಮದುವೆ ಆಮಂತ್ರಣ ಪತ್ರಿಕೆ ಆಕೆಯ ಕಣ್ಣಿಗೆ ಬಿದ್ದಿದೆ. ರಿಷಬ್‌ನ ಮಾತುಗಳನ್ನು ನಂಬದ ಯುವತಿ ತಕ್ಷಣವೇ ರಾಯಚೂರು ನಗರದ ಮಹಿಳಾ ಪೊಲೀಸ್ ಠಾಣೆಗೆ ತೆರಳಿ ರಿಷಬ್ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನ ಆಧಾರದ ಮೇಲೆ ಪೊಲೀಸರು ತಕ್ಷಣ ಕ್ರಮ ಕೈಗೊಂಡಿದ್ದಾರೆ. ಯುವತಿಯ ದೂರಿನಿಂದಾಗಿ ಇಂದು ನಡೆಯಬೇಕಿದ್ದ ರಿಷಬ್ ಮದುವೆ ಕೊನೆ ಕ್ಷಣದಲ್ಲಿ ನಿಂತುಹೋಗಿದೆ. ಸಂಬಂಧಿಕರು ವಾಪಸ್ ತೆರಳಿದ್ದು, ಎರಡೂ ಕಡೆಯ ಪೋಷಕರು ಮತ್ತು ಕುಟುಂಬಸ್ಥರಿಗೆ ತೀವ್ರ ಮುಜುಗರ ಮತ್ತು ನೋವುಂಟಾಗಿದೆ. ನನಗೆ ನನ್ನ ಗಂಡ ಬೇಕು ಎಂದು ಸಂತ್ರಸ್ತ ಯುವತಿ ಪೊಲೀಸರ ಬಳಿ ಪಟ್ಟು ಹಿಡಿದಿದ್ದಾಳೆ. ಮಹಿಳಾ ಪೊಲೀಸರು ದೂರನ್ನು ದಾಖಲಿಸಿಕೊಂಡು, ಘಟನೆಯ ಕುರಿತು ಸಮಗ್ರ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ : ಬಾಗಲಕೋಟೆಯಲ್ಲಿ ಭೀಕರ ಸರಣಿ ಅಪಘಾತ – ಒಬ್ಬರ ಸಾವು, ಮೂವರಿಗೆ ಗಂಭೀರ ಗಾಯ!







