ವಿಧಾನಸಭೆಯಲ್ಲಿ ʻಗೃಹಲಕ್ಷ್ಮಿʼ ಕಿತ್ತಾಟ – ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸುಳ್ಳು ಹೇಳಿದ ಆರೋಪ, ಆರ್.‌ ಅಶೋಕ್‌ ಆಕ್ರೋಶ!

ಬೆಳಗಾವಿ : ರಾಜ್ಯ ವಿಧಾನಸಭೆಯಲ್ಲಿ ʻಗೃಹಲಕ್ಷ್ಮಿʼ ಯೋಜನೆಯ ಹಣ ಬಿಡುಗಡೆ ಕುರಿತು ಶುಕ್ರವಾರ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ನಡುವೆ ತೀವ್ರ ವಾಕ್ಸಮರ ನಡೆಯಿತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹಲಕ್ಷ್ಮಿ ಕಂತುಗಳು ಬಾಕಿ ಉಳಿದಿರುವ ಬಗ್ಗೆ ಸಚಿವರು ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದ ಆರ್.‌ ಅಶೋಕ್‌, ಸಚಿವರ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ಆಗ್ರಹಿಸಿ ಅಬ್ಬರಿಸಿದರು.

ಸದನದಲ್ಲಿ ಶಾಸಕ ಮಹೇಶ್‌ ಟೆಂಗಿನಕಾಯಿ ಅವರು, ʻಗೃಹಲಕ್ಷ್ಮಿʼ ಯೋಜನೆಯ ಫೆಬ್ರವರಿ ಮತ್ತು ಮಾರ್ಚ್‌ ತಿಂಗಳ ಕಂತಿನ ಹಣ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್  ಅವರು, ಆಗಸ್ಟ್‌ವರೆಗೂ ಕ್ಲಿಯರ್‌ ಆಗಿದೆ. ಆಗಸ್ಟ್‌ವರೆಗೆ ಅಂದರೆ ಫೆಬ್ರವರಿ, ಮಾರ್ಚೂ ಸೇರುತ್ತೆ, ಅರ್ಥ ಮಾಡಿಕೊಳ್ಳಿ, ಎಂದು ಹೇಳಿದ್ದರು. ಆದರೆ, ಈ ಉತ್ತರ ಬಿಜೆಪಿ (BJP) ನಾಯಕರಿಗೆ ಸಮಾಧಾನ ತಂದಿರಲಿಲ್ಲ.

ಶುಕ್ರವಾರ ಮತ್ತೆ ಈ ವಿಚಾರವನ್ನು ಪ್ರಸ್ತಾಪಿಸಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌  ಅವರು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರು ಸದನಕ್ಕೆ ತಪ್ಪು ಉತ್ತರ ನೀಡಿದ್ದಾರೆ ಎಂದು ಆರೋಪಿಸಿದರು. ಸಚಿವರು ಫೆಬ್ರವರಿ, ಮಾರ್ಚ್ ಕಂತು ಬಂದಿದೆ ಎಂದು ಸದನಕ್ಕೆ ಉತ್ತರಿಸಿದ್ದಾರೆ. ಆದರೆ, ಆ ಎರಡು ತಿಂಗಳ ಹಣವನ್ನು ಕೊಟ್ಟೇ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಾವೇರಿ ಹಾಗೂ ಗದಗ ಉಪನಿರ್ದೇಶಕರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ, ಎಂದು ಹೇಳಿ, ಸಂಬಂಧಪಟ್ಟ ಅಧಿಕೃತ ಪತ್ರವೊಂದನ್ನು ಸದನದಲ್ಲಿ ಪ್ರದರ್ಶಿಸಿದರು. ಸಚಿವರು ತಪ್ಪು ಉತ್ತರ ಕೊಟ್ಟು ಸದನದ ಗೌರವ ಕಳೆದಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿಗೆ ಅವಕಾಶ ಕೊಡುತ್ತೀರಾ? ಅವರಿಗೆ ಏನು ಪನಿಶ್ಮೆಂಟ್‌ ಕೊಡುತ್ತೀರಾ?” ಎಂದು ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.

ಈ ವೇಳೆ ಅಶೋಕ್ ಅವರು ಸಚಿವರ ವಿರುದ್ಧ ವೈಯಕ್ತಿಕ ಟೀಕೆಯನ್ನೂ ಮಾಡಿದರು. ರಾತ್ರಿ ಎಲ್ಲಾ ಡಿನ್ನರ್‌ ಮೀಟಿಂಗ್‌ ಇದ್ದರೆ ಬೆಳಗ್ಗೆ ಏಳೋದು ಲೇಟಾಗುತ್ತೆ. ಸದನಕ್ಕೆ ತಯಾರಾಗದೇ ಹೀಗೆ ತಪ್ಪು ಉತ್ತರ ಕೊಡ್ತಾರೆ. ಹಾಗಾಗಿ ಸದನ ಮುಗಿಯೋವರೆಗೆ ಡಿನ್ನರ್ ಮೀಟಿಂಗ್‌ಗಳನ್ನ ನಿಲ್ಲಿಸಬೇಕು, ಎಂದು ವ್ಯಂಗ್ಯವಾಡಿದರು. ಈ ಟೀಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಶಾಸಕ ಸುನೀಲ್ ಕುಮಾರ್ ಸಹ ದನಿಗೂಡಿಸಿ, ಸಚಿವರು ಸುಳ್ಳು ಹೇಳಿದ್ದಾರೆ ಎಂದರು.

ವಿವಾದ ತಾರಕಕ್ಕೇರುತ್ತಿದ್ದಂತೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಣ ಬಿಡುಗಡೆಯಾಗಿದೆ ಅಂದಿದ್ದಾರೆ. ಒಂದು ವೇಳೆ ಬಂದಿಲ್ಲ ಅಂದ್ರೆ ಕೊಡಿಸೋಣ. ಹೆಚ್ಚು-ಕಮ್ಮಿ ಆಗಿದ್ರೆ ಕೊಡಿಸೋಣ. ಸಚಿವರೇ ಸೋಮವಾರದಂದು ಮತ್ತೊಮ್ಮೆ ಈ ಬಗ್ಗೆ ಉತ್ತರ ಕೊಡ್ತಾರೆ, ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಸಿಎಂ ಭರವಸೆಯ ನಂತರ ಸ್ಪೀಕರ್ ಸಹ, ಸೋಮವಾರದಂದು ಸಚಿವರು ಸದನಕ್ಕೆ ಉತ್ತರ ನೀಡಲಿದ್ದಾರೆ ಎಂದು ಹೇಳಿದಾಗ ಸದ್ಯಕ್ಕೆ ಈ ಗೃಹಲಕ್ಷ್ಮಿ ಕದನಕ್ಕೆ ತೆರೆ ಬಿದ್ದಿದೆ.

ಇದನ್ನೂ ಓದಿ : ಗ್ರಾಮ ಪಂಚಾಯಿತಿ ಗ್ರಂಥಾಲಯ ಸಿಬ್ಬಂದಿ ಸಂಬಳ ವಿವಾದ – ₹36 ಕೋಟಿ ಬಾಕಿ, DBT ಜಾರಿಗೆ ಸಚಿವ ಸಂತೋಷ್ ಲಾಡ್ ಭರವಸೆ!

Btv Kannada
Author: Btv Kannada

Read More