ಡಿಜಿಟಲ್ ಅರೆಸ್ಟ್ ಹೆಸರಲ್ಲಿ 1.32 ಕೋಟಿ ವಂಚನೆ – ಕೋಟಿ ಕೋಟಿ ಹಣ ಕಳೆದುಕೊಂಡ ವೃದ್ಧ.. ಕೇಸ್ ದಾಖಲು!

ಬೆಂಗಳೂರು : ಡಿಜಿಟಲ್ ಜಗತ್ತು ಎಷ್ಟು ವೇಗವಾಗಿ ಬೆಳೆಯುತ್ತಿದೆಯೋ ಅಷ್ಟೇ ವೇಗದಲ್ಲಿ ಸೈಬರ್ ವಂಚನೆ (Cyber Crime) ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟೇ ಜಾಗೃತಿ ಮೂಡಿಸಿದರೂ ಜನ ಎಡವುತ್ತಿದ್ದು, ಹಣ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ, ಪೊಲೀಸರು ಅಥವಾ ಕಾನೂನು ಅಧಿಕಾರಿಗಳ ಸೋಗಿನಲ್ಲಿ ಬಂದು ಬೆದರಿಸಿ ಖಜಾನೆ ಖಾಲಿ ಮಾಡುವ ‘ಡಿಜಿಟಲ್ ಅರೆಸ್ಟ್’ (Digital Arrest) ಜಾಲಕ್ಕೆ ಸಿಲುಕಿ, ಇಲ್ಲೊಬ್ಬ 83 ವರ್ಷದ ವೃದ್ಧ ಬರೋಬ್ಬರಿ 1.32 ಕೋಟಿ ರೂ. ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ವಂಚನೆಗೊಳಗಾದ ವೃದ್ಧ ಯಲಹಂಕ ನಿವಾಸಿ ವರದರಾಜನ್ (83). ವರದರಾಜನ್ ಅವರ ಮಕ್ಕಳಿಬ್ಬರೂ ಲಂಡನ್‌ನಲ್ಲಿ ನೆಲೆಸಿದ್ದು, ಇವರು ಬೆಂಗಳೂರಿನಲ್ಲಿ ಒಬ್ಬರೇ ವಾಸವಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರ ಜಾಲ ಇವರನ್ನು ಟಾರ್ಗೆಟ್ ಮಾಡಿತ್ತು. ಕಳೆದ ನವೆಂಬರ್ 19 ರಂದು ವರದರಾಜನ್ ಅವರಿಗೆ ವಾಟ್ಸಪ್ ಮೂಲಕ ಕರೆ ಬಂದಿದೆ. ಕರೆ ಮಾಡಿದವರು, ನಾವು ಮುಂಬೈನಿಂದ ಕಾಲ್ ಮಾಡುತ್ತಿದ್ದೇವೆ. ನಾನು ಎಸಿಪಿ, ಮುಂಬೈ ಕ್ರೈಂ ಬ್ರ್ಯಾಂಚ್‌ನಿಂದ ಮಾತಾಡುತ್ತಿದ್ದೇನೆ ಎಂದು ಪರಿಚಯಿಸಿಕೊಂಡಿದ್ದಾರೆ.

ಮಾತು ಮುಂದುವರೆಸಿದ ವಂಚಕರು, ಮನಿ ಲಾಂಡ್ರಿಂಗ್ ಕೇಸಿನಲ್ಲಿ ನಿಮ್ಮ ಹೆಸರು ಕೇಳಿಬರುತ್ತಿದೆ. ಒಟ್ಟು 256 ಆಧಾರ್ ಕಾರ್ಡ್‌ಗಳ ಪೈಕಿ ನಿಮ್ಮ ಆಧಾರ್ ಕಾರ್ಡ್ ಕೂಡ ಸಿಕ್ಕಿದೆ. ನೀವು ವೃದ್ಧರಾಗಿರುವುದರಿಂದ ಸದ್ಯಕ್ಕೆ ನಿಮ್ಮನ್ನು ಅರೆಸ್ಟ್ ಮಾಡುತ್ತಿಲ್ಲ. ಆದರೆ, ನಾವು ಕರೆದಾಗ ನೀವು ಮುಂಬೈಗೆ ಬರಬೇಕಾಗುತ್ತದೆ ಎಂದು ಬೆದರಿಸಿದ್ದಾರೆ. ನಂತರ, ಆರ್‌ಬಿಐ (RBI) ಕಡೆಯಿಂದ ನಿಮ್ಮ ಅಕೌಂಟ್ ಪರಿಶೀಲಿಸಲಾಗುತ್ತಿದೆ ಎಂದು ನಂಬಿಸಿ, ತಕ್ಷಣವೇ ನಿಮ್ಮ ಅಕೌಂಟ್‌ನಲ್ಲಿರುವ ಹಣವನ್ನು ನಾವು ನೀಡುವ ಸರ್ಕಾರಿ ಬ್ಯಾಂಕ್ ಖಾತೆ ನಂಬರ್‌ಗೆ ವರ್ಗಾವಣೆ ಮಾಡಿ. ಇಲ್ಲವಾದಲ್ಲಿ ಅರೆಸ್ಟ್ ಆಗುವುದು ಖಚಿತ ಎಂದು ಒತ್ತಡ ಹೇರಿದ್ದಾರೆ.

ವರದರಾಜನ್ ವಂಚಕರ ಮಾತಿಗೆ ಹೆದರಿ, ತಮ್ಮ ಖಾತೆಯಲ್ಲಿದ್ದ ₹ 1.32 ಕೋಟಿ ಹಣವನ್ನು ಹಂತ ಹಂತವಾಗಿ ಅವರಿಗೆ ವರ್ಗಾಯಿಸಿದರು. ಹಣ ಪಡೆದ ನಂತರ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿದರು. ತಕ್ಷಣವೇ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ, ವೃದ್ಧ ವರದರಾಜನ್ ಅವರು ಬೆಂಗಳೂರು ಈಶಾನ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೃದ್ಧರನ್ನು ಗುರಿಯಾಗಿಸಿ ಕೋಟಿಗಟ್ಟಲೆ ಹಣ ದೋಚುತ್ತಿರುವ ಸೈಬರ್ ವಂಚಕರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸುವುದು ಅಗತ್ಯ.

ಇದನ್ನೂ ಓದಿ : ಮಾಜಿ ಸಚಿವ H.M ರೇವಣ್ಣ ಪುತ್ರನಿಂದ ಹಿಟ್ ಅಂಡ್ ರನ್ – ಬೈಕ್​​ ಸವಾರ ದುರ್ಮರಣ!

Btv Kannada
Author: Btv Kannada

Read More