ತುಮಕೂರು : ಸಣ್ಣ ಉದ್ದಿಮೆದಾರರಿಗೆ ಸರ್ಕಾರದಿಂದ ನೀಡುವ ಸಹಾಯಧನ ಮಂಜೂರು ಮಾಡಲು ಬರೋಬ್ಬರಿ 1.15 ಲಕ್ಷ ರೂ. ಲಂಚ ಪಡೆಯುತ್ತಿದ್ದಾಗ ಜಿಲ್ಲಾ ಕೈಗಾರಿಕಾ ಕೇಂದ್ರ (DIC)ದ ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು ಮತ್ತು ಅವರ ಸಹಾಯಕ ಎನ್.ಎಸ್. ಪ್ರಸಾದ್ ಅವರನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ನಗರದ ವಿಜಯನಗರ ಬಡಾವಣೆಯ ನಿವಾಸಿ ಎಂ.ಎಸ್. ಚನ್ನಬಸವೇಶ್ವರ ಅವರು ತಾಲ್ಲೂಕಿನ ವಸಂತನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಶಿವಲಿಂಗ ಇಂಡಸ್ಟ್ರೀಸ್ ಎಂಬ ಸಣ್ಣ ಉದ್ದಿಮೆ ಸ್ಥಾಪಿಸಿದ್ದಾರೆ. ಎಲೆಕ್ಟಿಕಲ್ ಕಂಟ್ರೋಲ್ ಪ್ಯಾನಲ್ ತಯಾರಿಕೆಯಲ್ಲಿ ತೊಡಗಿರುವ ಇವರಿಗೆ, ಪ್ರಥಮ ಬಾರಿಗೆ ಸಣ್ಣ ಉದ್ದಿಮೆ ಆರಂಭಿಸಿದ ಯೋಜನೆಯಡಿ ರಾಜ್ಯ ಸರ್ಕಾರದಿಂದ 18.75 ಲಕ್ಷ ರೂ. ಸಹಾಯಧನ ಮಂಜೂರಾಗಬೇಕಿತ್ತು.
ಈ ಸಹಾಯಧನವನ್ನು ಮಂಜೂರು ಮಾಡಲು ಜಂಟಿ ನಿರ್ದೇಶಕ ಡಿ.ಕೆ. ಲಿಂಗರಾಜು ಮತ್ತು ಸಹಾಯಕ ಎನ್.ಎಸ್. ಪ್ರಸಾದ್ ಒಟ್ಟು 1.25 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಲಂಚಕ್ಕೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಉದ್ದಿಮೆದಾರ ಚನ್ನಬಸವೇಶ್ವರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರುದಾರರಿಂದ ಈಗಾಗಲೇ ಆರೋಪಿಗಳು ಮುಂಗಡವಾಗಿ 10 ಸಾವಿರ ಹಣ ಪಡೆದಿದ್ದರು.
ನಿನ್ನೆ ಮಧ್ಯಾಹ್ನ ನಗರದ ಬಿ.ಎಚ್. ರಸ್ತೆಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದ ಕಚೇರಿ ಮುಂಭಾಗದಲ್ಲಿ ಉಳಿದ 1.15 ಲಕ್ಷ ಹಣವನ್ನು ಲಿಂಗರಾಜು ಪರವಾಗಿ ಸಹಾಯಕ ಪ್ರಸಾದ್ ಅವರು ಲಂಚದ ಹಣವನ್ನು ಪಡೆಯುತ್ತಿದ್ದಾಗ, ಲೋಕಾಯುಕ್ತ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿ ಇಬ್ಬರನ್ನೂ ರೆಡ್‌ಹ್ಯಾಂಡ್ ಆಗಿ ಬಂಧಿಸಿದೆ.
ಈ ಯಶಸ್ವಿ ಕಾರ್ಯಾಚರಣೆಯು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎ.ವಿ. ಲಕ್ಷ್ಮಿನಾರಾಯಣ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಡಿವೈಎಸ್‌ಪಿಗಳಾದ ಕೆ.ಎಂ. ಸಂತೋಷ್ ಮತ್ತು ಎಂ. ಮಂಜುನಾಥ ಅವರ ನೇತೃತ್ವದಲ್ಲಿ, ಇನ್‌ಸ್ಪೆಕ್ಟರ್‌ಗಳಾದ ಕೆ. ಸುರೇಶ ಮತ್ತು ಬಿ. ಮೊಹಮ್ಮದ್ ಸಲೀಂ ಅವರನ್ನೊಳಗೊಂಡ ತಂಡವು ಕಾರ್ಯಾಚರಣೆಯಲ್ಲಿ ಭಾಗವಹಿಸಿತ್ತು.
ಇದನ್ನೂ ಓದಿ : ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ – ಲಕ್ಷಾಂತರ ಮೌಲ್ಯದ ಹತ್ತಿ ಸುಟ್ಟು ಭಸ್ಮ!







