ಬೆಂಗಳೂರು : ರೌಡಿಶೀಟರ್ಗಳನ್ನು ಚುನಾವಣೆ, ಹಬ್ಬ ಹರಿ ದಿನಗಳಂದು ಸೇರಿ ಕೆಲ ಸಂದರ್ಭದಲ್ಲಿ ಮೌಖಿಕವಾಗಿ ಠಾಣೆಗೆ ಕರೆಸಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಇನ್ಮುಂದೆ ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿ ಮಾಡಲಾಗಿದೆ. ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಕರೆಸಬಹುದು ಎಂದು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ. ಆ ಮೂಲಕ ಮೌಖಿಕವಾಗಿ ಪೊಲೀಸ್ ಠಾಣೆಗೆ ರೌಡಿಶೀಟರ್ಗಳನ್ನು ಕರೆಸುವುದಕ್ಕೆ ಬ್ರೇಕ್ ಬಿದ್ದಂತಾಗಿದೆ.

ರೌಡಿಗಳನ್ನು ತನಿಖೆ ಅಥವಾ ವಿಚಾರಣೆಗಾಗಿ ಪೊಲೀಸ್ ಠಾಣೆಗಳಿಗೆ ಕರೆಸಲು ಸೂಕ್ತ ಆದೇಶ ಹೊರಡಿಸುವಂತೆ ಗೃಹ ಇಲಾಖೆ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡುವಂತೆ ಕೋರಿ ರೌಡಿಶೀಟರ್ ಸುನಿಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನಿಲ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ.ಆರ್.ನಟರಾಜ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ಮೆಟ್ಟಿಲೇರಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್ : ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಕರೆಸಿ ಎಚ್ಚರಿಸಿದ್ದರು. ಅಲೋಕ್ ಕುಮಾರ್ ವಾರ್ನಿಂಗ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುನೀಲ್ ಕುಮಾರ್ ರಿಟ್ ಅರ್ಜಿ ಸಂಬಂಧ ಆದೇಶ ಹೊರಡಿಸಲಾಗಿದೆ.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಅರ್ಜಿದಾರರು ಯಾವುದೇ ಅಪರಾಧದಲ್ಲಿ ಭಾಗಿಯಾಗಿಲ್ಲದಿದ್ದರೆ ಮತ್ತು ಅಪರಾಧದಲ್ಲಿ ಭಾಗಿಯಾಗಿದ್ದಾನೆಂದು ಶಂಕಿಸದಿದ್ದರೆ ಆತನ ಹೆಸರು ರೌಡಿ ಪಟ್ಟಿಯಲ್ಲಿದೆ ಎಂಬ ಕಾರಣಕ್ಕಾಗಿ ಪೊಲೀಸರು ಅವರನ್ನು ಆಗಾಗ್ಗೆ ಮೌಖಿಕ ಸೂಚನೆ ನೀಡಿ ಕರೆಸಬಾರದು. ಎಸ್‌ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಕರೆಸಬಹುದು. ಠಾಣೆಗಳಿಗೆ ರೌಡಿಶೀಟರ್ಗಳು ತಮ್ಮ ಮೊಬೈಲ್ ನಂಬರ್ ನೀಡಬೇಕು. ಮೌಖಿಕವಾಗಿ ಕರೆಯುವ ಬದಲು SMS, ವಾಟ್ಸಾಪ್ ಸಂದೇಶ ನೀಡಬೇಕು. ಒಂದು ವೇಳೆ ಆಗಲೂ ಠಾಣೆಗೆ ಬರದಿದ್ದರೆ ರೌಡಿಶೀಟರ್ ಮನೆಗೆ ಪೊಲೀಸರು ತೆರಳಬಹುದು ಎಂದು ತಿಳಿಸಿದೆ.
ಇನ್ನು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ. ದಂಡಾಧಿಕಾರಿಯ ಅಧಿಕಾರವನ್ನು ಈ ಆದೇಶ ಕುಂಠಿತಗೊಳಿಸುವುದಿಲ್ಲ. ಸರ್ಕಾರ ಕಾನೂನು ರೂಪಿಸುವವರೆಗೆ ಈ ಪ್ರಕ್ರಿಯೆ ಪಾಲಿಸಲು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ.
Author: Btv Kannada
Post Views: 425







