ಭೂ ಪರಿವರ್ತನೆ ನಿಯಮಗಳ ಸರಳೀಕರಣ – ಶೀಘ್ರದಲ್ಲಿಯೇ ಅಂತಿಮ ಅಧಿಸೂಚನೆ ಬಿಡುಗಡೆ, ಸಚಿವ ಕೃಷ್ಣ ಬೈರೇಗೌಡ!

ಬೆಳಗಾವಿ : ಕರ್ನಾಟಕದಲ್ಲಿ ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸರಳೀಕರಿಸಲು ರಾಜ್ಯ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95ರ ವಿವಿಧ ಉಪ-ಕಲಂಗಳಿಗೆ ತಿದ್ದುಪಡಿಗಳನ್ನು ಮಾಡಲಾಗಿದ್ದು, ಇದನ್ನು ಜಾರಿಗೆ ತರಲು ಸಂಬಂಧಿಸಿದ ನಿಯಮಗಳ ಅಂತಿಮ ಅಧಿಸೂಚನೆಯನ್ನು ಒಂದು ತಿಂಗಳೊಳಗೆ ಹೊರಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ವಿಧಾನ ಪರಿಷತ್‌ನಲ್ಲಿ ಹೇಳಿದ್ದಾರೆ.

ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ರಾಮೋಜಿ ಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಯ್ದೆಗೆ ಮಾಡಿದ ತಿದ್ದುಪಡಿಗಳಿಗೆ ಅನುಗುಣವಾಗಿ ಕರ್ನಾಟಕ ಭೂ ಕಂದಾಯ ನಿಯಮಗಳು, 1966ರ ವಿವಿಧ ನಿಯಮಗಳಿಗೆ ತಿದ್ದುಪಡಿ ಮಾಡಲು ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದರು.

ಸರ್ಕಾರವು ಈಗಾಗಲೇ 2025ರ ಸೆಪ್ಟೆಂಬರ್ 17 ರಂದು ಕರಡು ನಿಯಮಗಳ ಅಧಿಸೂಚನೆಯನ್ನು ಹೊರಡಿಸಿದೆ. ಇದನ್ನು ಜಾರಿಗೆ ತರುವ ಮೊದಲು ವಿವಿಧ ಇಲಾಖೆಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಭಿಪ್ರಾಯ ಹಾಗೂ ಸಲಹೆಗಳನ್ನು ಪಡೆಯಲಾಗಿದೆ. ಎಲ್ಲಾ ಪ್ರಕ್ರಿಯೆಗಳು ಮುಗಿದಿದ್ದು, ಶೀಘ್ರದಲ್ಲಿಯೇ, ಅಂದರೆ ಇನ್ನೊಂದು ತಿಂಗಳೊಳಗೆ ಅಂತಿಮ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ತಿದ್ದುಪಡಿಗಳ ಮೂಲಕ ಸರ್ಕಾರವು ವಿಶೇಷವಾಗಿ ಸಣ್ಣ ಕೈಗಾರಿಕೆಗಳಿಗೆ ಮತ್ತು ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಉತ್ತೇಜನ ನೀಡಲು ಮುಂದಾಗಿದೆ. ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ 2 ಎಕರೆವರೆಗೆ ಕೃಷಿ ಭೂಮಿಯನ್ನು ಪರಿವರ್ತಿಸುವ ಅವಶ್ಯಕತೆ ಇಲ್ಲ. ನೇರವಾಗಿ ಪ್ಲಾನ್ ಅನುಮೋದನೆ ಮಾಡಿಸಿಕೊಳ್ಳಬಹುದಾಗಿದೆ. ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಭೂ ಪರಿವರ್ತನೆ ಅಗತ್ಯವಿಲ್ಲ. ಕಂದಾಯ ನ್ಯಾಯಾಲಯ ನಡೆಸುವ ಕುರಿತಂತೆ ಸೂಕ್ತ ನಿಯಮಗಳನ್ನು ರೂಪಿಸಲಾಗುತ್ತಿದೆ.

ಇದನ್ನೂ ಓದಿ : ಉತ್ತರ ಕರ್ನಾಟಕಕ್ಕೆ ರೈತರಿಗೆ ಅನ್ಯಾಯ – ಬೆಳೆ ಹಾನಿ, ಮಳೆ ಹಾನಿ ಪರಿಹಾರ ಇಲ್ಲ ಶ್ವೇತಪತ್ರಕ್ಕೆ ಆರ್‌. ಅಶೋಕ್ ಆಗ್ರಹ!

Btv Kannada
Author: Btv Kannada

Read More