ಬೆಳಗಾವಿ : ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಪ್ರವಾಹ ಪೀಡಿತ ರೈತರಿಗೆ ಮತ್ತು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದ ಅಶೋಕ್, ಉತ್ತರ ಕರ್ನಾಟಕಕ್ಕೆ ನೀಡಿರುವ ಭರವಸೆಗಳೇನು ಮತ್ತು ಎಷ್ಟು ಈಡೇರಿವೆ ಎಂಬುದರ ಕುರಿತು ಕೂಡಲೇ ಶ್ವೇತಪತ್ರ ಬಿಡುಗಡೆ ಮಾಡುವಂತೆ ಆಗ್ರಹಿಸಿದರು.

ಆರ್. ಅಶೋಕ್ ಅವರು ಪರಿಹಾರ ವಿತರಣೆಯಲ್ಲಿನ ವಿಳಂಬದ ಬಗ್ಗೆ ಹಿಂದಿನ ಮತ್ತು ಈಗಿನ ಸರ್ಕಾರಗಳ ಅಂಕಿ-ಅಂಶಗಳನ್ನು ಪ್ರಸ್ತುತಪಡಿಸಿದರು. 2013-14ರಲ್ಲಿ 9 ತಿಂಗಳ ನಂತರ, 2014-15ರಲ್ಲಿ 8 ತಿಂಗಳ ನಂತರ ಪರಿಹಾರ ನೀಡಲಾಗಿತ್ತು. 2019, 2021, 2022 ಮತ್ತು 2023ರ ಪ್ರವಾಹ ಸಂದರ್ಭದಲ್ಲಿ ಕೇವಲ ಒಂದು ಅಥವಾ ಎರಡು ತಿಂಗಳಲ್ಲಿ ಪರಿಹಾರ ವಿತರಿಸಲಾಗಿತ್ತು. ಡಿಬಿಟಿ ಬದಲು ಫ್ರೂಟ್ಸ್ ತಂತ್ರಾಂಶ ತಂದು ನಾಲ್ಕು ತಿಂಗಳು ವಿಳಂಬ ಮಾಡಿದೆ, ಎಂದು ಆರೋಪಿಸಿದರು.
ಮನೆ ಹಾನಿ ಪರಿಹಾರದ ವಿಚಾರದಲ್ಲೂ ಅಶೋಕ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಎನ್‌ಡಿಆರ್‌ಎಫ್ ಮಾರ್ಗಸೂಚಿಯ 95,000 ರೂ. ಜೊತೆಗೆ ರಾಜ್ಯ ಸರ್ಕಾರದಿಂದ 4 ಲಕ್ಷ ರೂ. ಸೇರಿಸಿ ಒಟ್ಟು 5 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಕೇವಲ ಕೇಂದ್ರದ ಪಾಲಾದ 95,000 ರೂ. ಮಾತ್ರ ನೀಡುತ್ತಿದೆ. ಕೇವಲ 95,000 ರೂ.ನಲ್ಲಿ ಮನೆ ಕಟ್ಟಲು ಸಾಧ್ಯವಿಲ್ಲ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲಬುರ್ಗಿ, ಬೀದರ್, ವಿಜಯಪುರ ಸೇರಿದಂತೆ 117ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತವಾಗಿದ್ದು, 14.58 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ ಎಂದು ಅಶೋಕ್ ತಿಳಿಸಿದರು. ಮೈಸೂರಿನಲ್ಲಿ ದಸರಾ ಆಚರಿಸುತ್ತಿದ್ದರೆ, ಉತ್ತರ ಕರ್ನಾಟಕದ ಜನರು ನೀರಿನಲ್ಲಿದ್ದರು. ಮುಖ್ಯಮಂತ್ರಿಗಳು ಕಾರಿನಲ್ಲಿ ಬಂದು ಜನರನ್ನು ಭೇಟಿ ಮಾಡುವ ಬದಲು ವೈಮಾನಿಕ ಸಮೀಕ್ಷೆ ನಡೆಸಿದ್ದು ಸರಿಯಲ್ಲ. ಅಧಿಕಾರಿಗಳು ಕೂಡ ಸಮೀಕ್ಷೆ ಮಾಡದೆ ಪ್ರವಾಹ ಬಂದಿಲ್ಲ ಎಂದು ತಪ್ಪು ವರದಿ ನೀಡಿದ್ದಾರೆ ಎಂದು ಅಶೋಕ್ ಗಂಭೀರ ಆರೋಪ ಮಾಡಿದರು. ಯಾವೆಲ್ಲಾ ಹಳ್ಳಿಗಳಲ್ಲಿ ಪ್ರವಾಹ ಆಗಿದೆ ಎಂದು ಬಸವರಾಜ ಬೊಮ್ಮಾಯಿ ಪತ್ರ ಬರೆದರೂ, ಕಂದಾಯ ಇಲಾಖೆಯಿಂದ ಉತ್ತರ ನೀಡಿಲ್ಲ. ಸರ್ಕಾರ ರೈತರನ್ನು ಕೈಬಿಟ್ಟಿದೆ. ಮತ್ತೊಮ್ಮೆ ಸಮೀಕ್ಷೆ ನಡೆಸುವಂತೆ ಅವರು ಒತ್ತಾಯಿಸಿದರು.

ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸುವ (224 ಮೀಟರ್‌ಗೆ) ಮಹತ್ವದ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಆರ್ಥಿಕ ಇಲಾಖೆಯ ಸಲಹೆಯೊಂದನ್ನು ಅಶೋಕ್ ಸದನದಲ್ಲಿ ಪ್ರಸ್ತಾಪಿಸಿದರು. ಆಲಮಟ್ಟಿ ಯೋಜನೆಗೆ ಹಣ ಒದಗಿಸಲು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಅಥವಾ ಎಲ್ಲ ಇಲಾಖೆಗಳಲ್ಲಿ ಶೇ.20ರಷ್ಟು ಅನುದಾನ ಕಡಿತಗೊಳಿಸಬೇಕು ಎಂದು ಆರ್ಥಿಕ ಇಲಾಖೆ ಸಲಹೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಗ್ಗೆ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕಿದೆ, ಎಂದು ಹೇಳಿದರು.
ಒಬ್ಬ ರಾಜ ಒಂದು ಹೆಜ್ಜೆ ಮುಂದೆ ಇಟ್ಟರೆ ಸೈನಿಕರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ ಇಲ್ಲಿ ನಾಯಕತ್ವವೇ ಇಲ್ಲ. ಒಬ್ಬ ಶಾಸಕ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳುತ್ತಾರೆ. ಇಲ್ಲಿ ನಾಯಕತ್ವದ ಬಗ್ಗೆ ಗೊಂದಲವಿದೆ. ಕೆಲವು ಶಾಸಕರು ಡಿ.ಕೆ.ಶಿವಕುಮಾರ್ ಪರವಾಗಿ ಹೇಳಿದರೆ, ಮತ್ತೊಬ್ಬ ಶಾಸಕರು ಡಿಕೆಶಿಗೆ ಕೂಲಿ ಕೊಡಿ ಎಂದು ಕೇಳುತ್ತಾರೆ. ಇಡ್ಲಿ ವಡೆ ತಿಂದರೆ ಸಮಸ್ಯೆ ಬಗೆಹರಿಯಲ್ಲ. ಹಾದಿ ಬೀದಿಯಲ್ಲಿ ನಾನೇ ಸಿಎಂ ಎಂದು ಹೇಳುವುದು ಮುಖ್ಯಮಂತ್ರಿ ಹುದ್ದೆಗೆ ಶೋಭೆ ತರುವುದಿಲ್ಲ. ಸರಿಯಾಗಿ ಕುಳಿತು ಯಾರು ಸಿಎಂ ಎಂದು ತೀರ್ಮಾನಿಸಿ ಎಂದರು.
ಅಧಿಕಾರದ ಗೊಂದಲದಿಂದಾಗಿ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಬಗೆಹರಿಸಲು ಸರಿಯಾದ ನಾಯಕತ್ವವೇ ಇಲ್ಲ ಎಂದು ಅಶೋಕ್ ತೀವ್ರ ಟೀಕೆ ಮಾಡಿದರು. ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಕೇವಲ ಶೇ.19ರಷ್ಟು ಮಾತ್ರ ಖರ್ಚು ಮಾಡಲಾಗಿದೆ. ಯುವ ಸಬಲೀಕರಣ ಇಲಾಖೆಯಲ್ಲಿ ಶೇ.14 ಮಾತ್ರ ಖರ್ಚು ಮಾಡಲಾಗಿದೆ. ಇದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಆರೋಪಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 2024-25ರಲ್ಲಿ 53 ಪದವಿ ಕಾಲೇಜುಗಳಲ್ಲಿ ಮತ್ತು ಐದು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಶೂನ್ಯ ಫಲಿತಾಂಶ ಬಂದಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದರು. 21,000 ಶಿಕ್ಷಕರ ಹುದ್ದೆ ಭರ್ತಿ ಮಾಡುವ ಭರವಸೆ ಈಡೇರಿಲ್ಲ. ಅಲ್ಲದೆ, ಬೆಂಗಳೂರಿನ ತಲಾ ಆದಾಯ 7 ಲಕ್ಷ ರೂ. ಇದ್ದರೆ, ಕಲಬುರ್ಗಿಯ ತಲಾ ಆದಾಯ ಕೇವಲ 1.43 ಲಕ್ಷ ರೂ. ಇದೆ ಎಂದು ಅಸಮಾನತೆಯನ್ನು ಎತ್ತಿ ತೋರಿಸಿದರು.
ಮಂಗಳಮುಖಿಯರು ರಸ್ತೆ ಸಿಗ್ನಲ್‌ಗಳಲ್ಲಿ ನಿಲ್ಲುತ್ತಾರೆ. ಸಮಾಜ ಅವರನ್ನು ಬಹಳ ಕೀಳಾಗಿ ನೋಡುತ್ತಿದೆ. ಆದ್ದರಿಂದ ಮಂಗಳಮುಖಿಯರಿಗೆ ಶೇ.0.5 ರಷ್ಟಾದರೂ ಮೀಸಲಾತಿ ನೀಡುವ ಬಗ್ಗೆ ಸರ್ಕಾರ ಚಿಂತಿಸಲಿ ಎಂದರು.
ಇದನ್ನೂ ಓದಿ : ಬಸವ ವಸತಿ ಯೋಜನೆ – ಮನೆ ನಿರ್ಮಾಣ ಸಹಾಯಧನ 4 ಲಕ್ಷ ರೂ. ನೀಡಲು ಸರ್ಕಾರ ಚಿಂತನೆ!







