ಬಸವ ವಸತಿ ಯೋಜನೆ – ಮನೆ ನಿರ್ಮಾಣ ಸಹಾಯಧನ 4 ಲಕ್ಷ ರೂ. ನೀಡಲು ಸರ್ಕಾರ ಚಿಂತನೆ!

ಬೆಳಗಾವಿ : ರಾಜ್ಯದಲ್ಲಿ ಬಡವರಿಗೆ ವಸತಿ ಕಲ್ಪಿಸುವ ಮಹತ್ವಕಾಂಕ್ಷೆಯ ಬಸವ ವಸತಿ ಯೋಜನೆಯ (Basava Housing Scheme) ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಸಿಹಿಸುದ್ದಿ ನೀಡುವ ಚಿಂತನೆ ನಡೆಸಿದೆ. ಪ್ರಸ್ತುತ ನೀಡಲಾಗುತ್ತಿರುವ ಸಹಾಯಧನದ ಮೊತ್ತವನ್ನು ಕನಿಷ್ಠ 3 ರಿಂದ 4 ಲಕ್ಷ ರೂ.ವರೆಗೆ ಹೆಚ್ಚಳ ಮಾಡುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಸಚಿವ ಜಮೀರ್ ಅಹಮದ್ ಖಾನ್ ಅವರು ಹೇಳಿದ್ದಾರೆ.

ಈ ಕುರಿತು ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಪ್ರದೀಪ್ ಶೆಟ್ಟರ್ ಅವರ ಪ್ರಶ್ನೆಗೆ ಉತ್ತರಿಸಿದ ವಸತಿ ಸಚಿವರು, ಸಹಾಯಧನದ ಹೆಚ್ಚಳದ ಅವಶ್ಯಕತೆಯನ್ನು ಒತ್ತಿ ಹೇಳಿದರು.

ಬಸವ ವಸತಿ ಯೋಜನೆಗೆ ಈಗ ನೀಡುತ್ತಿರುವ ಸಹಾಯಧನವು ಮನೆ ನಿರ್ಮಾಣಕ್ಕೆ ಸಾಕಾಗುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿ ಕೇಳಿಬಂದಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕಚ್ಚಾ ವಸ್ತುಗಳ ಬೆಲೆ ದುಬಾರಿಯಾಗಿರುವುದರಿಂದ, ಆಯ್ಕೆಯಾದ ಫಲಾನುಭವಿಗಳಿಗೆ ಕನಿಷ್ಠ 3 ರಿಂದ 4 ಲಕ್ಷ ರೂ.ವರೆಗಾದರೂ ಸಹಾಯಧನ ನೀಡುವ ಬಗ್ಗೆ ಸರ್ಕಾರವು ಗಂಭೀರವಾಗಿ ಚಿಂತನೆ ನಡೆಸಿದೆ.

ವಿವಿಧ ವಸತಿ ಯೋಜನೆಗಳಡಿ ನೀಡಲಾಗುತ್ತಿರುವ ಸಹಾಯಧನವನ್ನು ಹೆಚ್ಚಿಸುವ ಈ ಮಹತ್ವದ ಪ್ರಸ್ತಾವನೆಯು ಪ್ರಸ್ತುತ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಮುಂಬರುವ ಬಜೆಟ್‌ನಲ್ಲಿ ಈ ಸಹಾಯಧನ ಹೆಚ್ಚಳವನ್ನು ಪರಿಗಣಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಎಂದು ಜಮೀರ್ ಅಹಮದ್ ಖಾನ್ ಹೇಳಿದರು.

ಇದೇ ವೇಳೆ, ಕೇಂದ್ರ ಸರ್ಕಾರದ ವಸತಿ ಯೋಜನೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ವಸತಿ ಯೋಜನೆಗಳ ಅಡಿಯಲ್ಲಿ ಅನುದಾನ ಬಿಡುಗಡೆ ಬಾಕಿ ಇರುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು. 2025-26ನೇ ಸಾಲಿನಲ್ಲಿ ರಾಜ್ಯದಲ್ಲಿ ವಿವಿಧ ವಸತಿ ಯೋಜನೆಗಳ ಅಡಿ, ಅಕ್ಟೋಬರ್-2025 ರ ಅಂತ್ಯಕ್ಕೆ ₹1324.26 ಕೋಟಿ ಅನುದಾನವನ್ನು ಅರ್ಹ ಫಲಾನುಭವಿಗಳಿಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ : ಬೀದರ್‌ನಲ್ಲಿ ಭೀಕರ ದುರಂತ – ಶಾಲಾ ವಾಹನ ಹರಿದು 8 ವರ್ಷದ ಬಾಲಕಿ‌ ದುರ್ಮರಣ!

Btv Kannada
Author: Btv Kannada

Read More