ಕಾರವಾರ : ಮಾದಕ ವಸ್ತುವಿಗಾಗಿ ಕಾರವಾರ ಜೈಲಿನಲ್ಲಿ ಕೈದಿಗಳು ಮತ್ತೆ ಗಲಾಟೆ ಮಾಡಿದ್ದಾರೆ. ಈ ಹಿಂದೆ ತಂಬಾಕು ಕೊಟ್ಟಿಲ್ಲವೆಂದು ಜೈಲು ಸಿಬ್ಬಂದಿ ಮೇಲೆಯೇ ಹಲ್ಲೆ ಮಾಡಿದ ಕೈದಿಗಳ ಗ್ಯಾಂಗ್ನ ಮತ್ತಿಬ್ಬರು ಇದೀಗ ಮಾದಕವಸ್ತು ಕೊಟ್ಟಿಲ್ಲವೆಂದು ಟಿವಿ ಒಡೆದು ದಾಂಧಲೆ ನಡೆಸಿದ್ದಾರೆ.
ಕೆಲವು ದಿನಗಳ ಹಿಂದೆ ಜೈಲರ್ ಹಾಗೂ ಮೂವರು ಸಿಬ್ಬಂದಿ ಮೇಲೆ ಮಂಗಳೂರು ಮೂಲದ ರೌಡಿಗಳಾದ ಮಂಗಳೂರು ಮೂಲದ ಮೊಹಮ್ಮದ್ ಅಬ್ದುಲ್, ಫಯಾನ್ ಹಾಗೂ ಕೌಶಿಕ್ ನಿಹಾಲ್ ಹಲ್ಲೆ ಮಾಡಿದ್ದರು. ಅದೇ ಗ್ಯಾಂಗ್ಗೆ ಸೇರಿದ ಕಬೀರ್ ಮತ್ತು ನೌಶಾದ್ ಜೈಲಿನಲ್ಲಿ ಗಲಾಟೆ ಮಾಡಿದ್ದಾರೆ. ಟಿವಿಯನ್ನು ಒಡೆದು ಹಾಕಿದ್ದಲ್ಲದೆ, ಇತರ ಹಲವು ವಸ್ತುಗಳನ್ನು ನಾಶಮಾಡಿದ್ದಾರೆ.
ಘಟನೆ ಬೆನ್ನಲ್ಲೇ ಕಾರವಾರ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರು ಮಂದಿ ಕೈದಿಗಳನ್ನು ಕಾರವಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಆ ಕೈದಿಗಳೇ ಜೈಲಿನಲ್ಲಿ ದಾಂಧಲೆ ಎಬ್ಬಿಸುತ್ತಿದ್ದಾರೆ. ಈ ಕೈದಿಗಳು ಡಕಾಯಿತಿ ಸೇರಿದಂತೆ 12ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದಾರೆ.
ಘಟನೆ ನಂತರ ಕಾರವಾರ ಡಿವೈಎಸ್‌ಪಿ ಗಿರೀಶ್ ನೇತೃತ್ವದ ಪೊಲೀಸರು ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೈಲಿನ ಭದ್ರತೆ ಹೆಚ್ಚಿಸಲು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆದಿದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ನ್ಯೂ ಇಯರ್ಗೆ ಟೈಟ್ ರೂಲ್ಸ್ – ಗೈಡ್‌ಲೈನ್ಸ್ ಬಿಡುಗಡೆ!







