ಮಂಡ್ಯ : ಗ್ರಾಮ ಪಂಚಾಯತಿ ಅಧಿಕಾರಿಗಳು ಅಕ್ರಮವಾಗಿ ವಾಸದ ಸ್ಥಳದ ಖಾತೆಯನ್ನು ವರ್ಗಾಯಿಸಿರುವ ಕ್ರಮವನ್ನು ವಿರೋಧಿಸಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಮರಳಿಗ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ತಿಯ ವಿವಾದಕ್ಕೆ ಸಂಬಂಧಿಸಿದ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ, ಗ್ರಾಮಸ್ಥರು ಮತ್ತು ಕುಟುಂಬಸ್ಥರು ಮೃತದೇಹವನ್ನೇ ರಸ್ತೆಯಲ್ಲಿಟ್ಟು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ಮರಳಿಗ ಗ್ರಾಮದಲ್ಲಿ ವೆಂಕಟೇಶ್ ಅವರಿಗೆ ಸೇರಿದ ವಾಸದ ಸ್ಥಳದ ಖಾತೆಯನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಅಕ್ರಮವಾಗಿ ಗೌರಮ್ಮ ಅವರಿಗೆ ಮಾಡಿಕೊಟ್ಟಿದ್ದಾರೆ ಎಂಬ ಆರೋಪಿಸಲಾಗಿದೆ. ಈ ಅಕ್ರಮ ಖಾತೆ ವರ್ಗಾವಣೆ ಕುರಿತು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ವೆಂಕಟೇಶ್ ಅವರು ಮೃತಪಟ್ಟಿದ್ದು, ಅಕ್ರಮ ಖಾತೆ ರದ್ದುಗೊಳಿಸುವವರೆಗೂ ಅಂತ್ಯಕ್ರಿಯೆ ಮಾಡದಿರಲು ಕುಟುಂಬಸ್ಥರು ಮತ್ತು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ನ್ಯಾಯ ಸಿಗುವವರೆಗೂ ಮೃತದೇಹವನ್ನು ರಸ್ತೆಯಿಂದ ತೆಗೆಯುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ರಸ್ತೆಯಲ್ಲಿ ಮೃತದೇಹವಿಟ್ಟು ಪ್ರತಿಭಟನೆ ನಡೆಸುತ್ತಿರುವುದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಘಟನಾ ಸ್ಥಳಕ್ಕೆ ಬೆಸಗರಹಳ್ಳಿ ಠಾಣೆ ಪೊಲೀಸರು ಮತ್ತು ಮದ್ದೂರು ತಹಶೀಲ್ದಾರ್ ಪರಶುರಾಮ್ ಭೇಟಿ ನೀಡಿದ್ದು, ಪ್ರತಿಭಟನಾಕಾರರ ಮನವೊಲಿಸಿ ಪರಿಸ್ಥಿತಿ ತಿಳಿಗೊಳಿಸಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ.

ಇದನ್ನೂ ಓದಿ : ಅಕ್ರಮ ಸಂಬಂಧಕ್ಕೆ ಬಿತ್ತು ಮತ್ತೊಂದು ಹೆಣ – ಪ್ರಿಯತಮೆ ಮನೆಯಲ್ಲೇ ಪ್ರಿಯಕರ ಅಗ್ನಿಗಾಹುತಿ!







