ಬೆಳಗಾವಿ : ಕಳೆದ ಎಂಟು ದಿನಗಳಿಂದ ದೇಶಾದ್ಯಂತ ವಿಮಾನಗಳ ಹಾರಾಟ ರದ್ದು ಮತ್ತು ಸಂಚಾರ ವ್ಯತ್ಯಯದಿಂದಾಗಿ ಪ್ರಯಾಣಿಕರಿಗೆ ಉಂಟಾದ ತೀವ್ರ ಸಮಸ್ಯೆಗೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಸಚಿವ ರಾಮ್‌ಮೋಹನ್ ನಾಯ್ಡು ಅವರು ಇಂಡಿಗೋ (Indigo) ವಿಮಾನಯಾನ ಸಂಸ್ಥೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ರಾಮ್‌ಮೋಹನ್ ನಾಯ್ಡು ಅವರು, ಯಾವುದೇ ವಿಮಾನಯಾನ ಸಂಸ್ಥೆಯೂ ದೇಶದ ಕಾನೂನಿಗಿಂತ ದೊಡ್ಡದಲ್ಲ ಎಂದು ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಿಮಾನಗಳ ರದ್ಧತಿ ಮತ್ತು ಪ್ರಯಾಣಿಕರ ತೊಂದರೆಗೆ ಇಂಡಿಗೋದ ಆಂತರಿಕ ರೋಸ್ಟರಿಂಗ್ ಅಡಚಣೆಗಳೇ ಕಾರಣ. “ಯಾವುದೇ ಸಂಸ್ಥೆಯು ಯೋಜನಾ ವೈಫಲ್ಯ ಮತ್ತು ಶಾಸನಬದ್ಧ ನಿಬಂಧನೆಗಳ ಉಲ್ಲಂಘನೆಯಿಂದ ಪ್ರಯಾಣಿಕರಿಗೆ ತೊಂದರೆ ಕೊಡುವಂತಿಲ್ಲ” ಎಂದು ಗುಡುಗಿದರು. ವಿಮಾನಗಳ ರದ್ಧತಿಯಿಂದಾದ ಸಮಸ್ಯೆಗೆ ಇಂಡಿಗೋ ಸಂಸ್ಥೆಯೇ ಹೊಣೆ. ಈ ಸಂಬಂಧ ಇಂಡಿಗೋ ಸಿಇಓಗೆ ಈಗಾಗಲೇ ಶೋಕಾಸ್ ನೋಟಿಸ್ ನೀಡಲಾಗಿದೆ.

ಸಮಸ್ಯೆಯ ಗಂಭೀರತೆಯನ್ನು ಮನಗಂಡು ಸರ್ಕಾರವು ಈಗಾಗಲೇ ತನಿಖೆಯನ್ನು ಆರಂಭಿಸಿದೆ. ತನಿಖಾ ವರದಿ ಆಧಾರದ ಮೇಲೆ ವಿಮಾನಯಾನ ನಿಯಮಗಳು ಹಾಗೂ ಕಾಯ್ದೆಯಡಿಯಲ್ಲಿ ಕಠಿಣ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಎಂದು ಸಚಿವರು ಸದನದಲ್ಲಿ ಹೇಳಿದರು.

ಪ್ರಯಾಣಿಕರ ಬಿಕ್ಕಟ್ಟು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (DGCA) ಮಹತ್ವದ ಕ್ರಮ ಕೈಗೊಂಡಿದೆ. ಸದ್ಯಕ್ಕೆ ಇಂಡಿಗೋ ತನ್ನ ವಿಮಾನಗಳ ಹಾರಾಟವನ್ನು ಶೇ. 5 ರಷ್ಟು ಕಡಿಮೆ ಮಾಡುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಸೋಮವಾರ ಸಂಜೆ 5 ಗಂಟೆಯೊಳಗೆ ಪರಿಷ್ಕೃತ ವಿಮಾನಯಾನ ವೇಳಾಪಟ್ಟಿಯನ್ನು (Revised Schedule) ಸರ್ಕಾರಕ್ಕೆ ಸಲ್ಲಿಸುವಂತೆ ವಿಮಾನಯಾನ ಸಂಸ್ಥೆಗೆ ತಿಳಿಸಲಾಗಿದೆ.
ಇದನ್ನೂ ಓದಿ : ವಿಧಾನಸಭೆಯಲ್ಲೂ ಮುಂದಿನ ಸಿಎಂ ಯಾರು? ಕೂಗು – ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ!







