ಬೆಂಗಳೂರು : ಕರ್ನಾಟಕ ವಿಧಾನಸಭೆಯ ಕಲಾಪದಲ್ಲಿ “ಮುಂದಿನ ಮುಖ್ಯಮಂತ್ರಿ ಯಾರು?” ಎಂಬ ವಿಷಯವು ಪ್ರತಿಧ್ವನಿಸಿ, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು. ಪ್ರಶ್ನೋತ್ತರ ಕಲಾಪ ಮತ್ತು ಅಧಿವೇಶನ ಆರಂಭದಲ್ಲೇ ಈ ವಿಚಾರ ಪ್ರಸ್ತಾಪವಾದಾಗ ಸದನದಲ್ಲಿ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಪ್ರಶ್ನೋತ್ತರ ಕಲಾಪದ ವೇಳೆ ಬಿಜೆಪಿ ಶಾಸಕ ಸಿಮೆಂಟ್ ಮಂಜು ಅವರು ಆನ್‌ಲೈನ್ ಗೇಮ್ ಬೆಟ್ಟಿಂಗ್ ಕುರಿತು ಕೇಳಿದ ಪ್ರಶ್ನೆಗೆ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಉತ್ತರಿಸುತ್ತಿದ್ದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ವಿಶಿಷ್ಟ ತಿರುಗೇಟು ನೀಡಿದರು. “ನೀವು ಇಲ್ಲಿ ಬೆಟ್ಟಿಂಗ್ ಪ್ರಸ್ತಾಪ ಮಾಡ್ತಾ ಇದ್ದೀರಾ? ಆದರೆ, ರಾಜ್ಯದಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಬಗ್ಗೆಯೇ ಬೆಟ್ಟಿಂಗ್ ನಡೆಯುತ್ತಿದೆ. ಶಾಸಕರಲ್ಲೇ ಈ ಕುರಿತು ಪಣ ಕಟ್ಟಲಾಗುತ್ತಿದೆ,” ಎಂದು ಸುನೀಲ್ ಕುಮಾರ್ ಅವರು ನೇರವಾಗಿ ಆಡಳಿತ ಪಕ್ಷವನ್ನು ಕೆಣಕಿದರು.

ಸುನೀಲ್ ಕುಮಾರ್ ಅವರ ಈ ಹೇಳಿಕೆಗೆ ಸ್ಪೀಕರ್ ಅವರು ಮಧ್ಯಪ್ರವೇಶಿಸಿ, “ಈಗ ಅದೆಲ್ಲ ಚರ್ಚೆ ಬೇಡ. ಕೂರಿ,” ಎಂದು ಸೂಚಿಸಿದರು. ಆಡಳಿತ ಪಕ್ಷದ ಸದಸ್ಯರು ಈ ಟೀಕೆಗೆ ಪ್ರತಿಕ್ರಿಯಿಸದೆ ನಕ್ಕು ಸುಮ್ಮನಾದರು.
ಅಧಿವೇಶನದ ಕಲಾಪ ಆರಂಭದಲ್ಲೂ ಇದೇ ವಿಷಯ ಪ್ರಸ್ತಾಪವಾಯಿತು. ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಅವರು, “ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ಟ್ವೀಟ್ ಮಾಡಿದ್ದಾರೆ. ಹಾಗಾದರೆ ರಾಜ್ಯದ ಮುಖ್ಯಮಂತ್ರಿ ಯಾರು?” ಎಂದು ಪ್ರಶ್ನಿಸಿ ಗೊಂದಲದ ವಾತಾವರಣ ಸೃಷ್ಟಿಸಲು ಯತ್ನಿಸಿದರು. ಬೆಲ್ಲದ್ ಅವರ ಪ್ರಶ್ನೆಗೆ ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಶಾಸಕರು, “ಅದು ನಮ್ಮ ಪಕ್ಷದ ಆಂತರಿಕ ವಿಚಾರ. ನಿಮಗೇಕೆ ಅದರ ಬಗ್ಗೆ ಚಿಂತೆ?” ಎಂದು ವಾಗ್ದಾಳಿ ನಡೆಸಿದರು.

ಈ ಗದ್ದಲದ ನಡುವೆ ಸ್ಪೀಕರ್ ಅವರು ಮಧ್ಯಪ್ರವೇಶಿಸಿ, “ನಾವು ಉತ್ತರ ಕರ್ನಾಟಕದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಅದಕ್ಕೆ ಇಂತಹ ವೈಯಕ್ತಿಕ ಅಥವಾ ಪಕ್ಷದ ವಿಚಾರಗಳು ಏಕೆ ಬೇಕು?” ಎಂದು ಗರಂ ಆದರು. ಸ್ಪೀಕರ್ ಸೂಚನೆಯ ನಂತರವೂ ಕಾಂಗ್ರೆಸ್ ಶಾಸಕರು ವಿಪಕ್ಷ ಸದಸ್ಯರತ್ತ ಆಕ್ಷೇಪ ವ್ಯಕ್ತಪಡಿಸುವುದನ್ನು ಮುಂದುವರೆಸಿದರು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ಅಧಿಕಾರ ಹಂಚಿಕೆಯ ವದಂತಿಗಳು ಆಗಾಗ ಕೇಳಿಬರುತ್ತಿರುವ ಸಂದರ್ಭದಲ್ಲಿ, ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿ ಆಡಳಿತ ಪಕ್ಷಕ್ಕೆ ಮುಜುಗರ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
ಈ ಗದ್ದಲದ ನಡುವೆ ಸ್ಪೀಕರ್ ಮಧ್ಯಪ್ರವೇಶಿಸಿ, “ನಾವು ಉತ್ತರ ಕರ್ನಾಟಕದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕಿದೆ. ಅದಕ್ಕೆ ಇಂತಹ ವೈಯಕ್ತಿಕ ಅಥವಾ ಪಕ್ಷದ ವಿಚಾರಗಳು ಏಕೆ ಬೇಕು?” ಎಂದು ಗರಂ ಆದರು. ಅಲ್ಲದೆ ಕಾಂಗ್ರೆಸ್ ಶಾಸಕರಿಂದಲೂ ಆಕ್ಷೇಪ ವ್ಯಕ್ತವಾಯ್ತು. ಅದು ನಮ್ಮ ಪಕ್ಷದ ವಿಚಾರ ನಿಮಗ್ಯಾಕೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನಾನೇ ನಿಜವಾದ ವಿರೋಧ ಪಕ್ಷದ ನಾಯಕ – ವಿಧಾನಸಭೆಯಲ್ಲಿ ಕುರ್ಚಿ ಬದಲಾಯಿಸಿದ್ದಕ್ಕೆ ಯತ್ನಾಳ್ ಗುಡುಗು!







