ನಾನೇ ನಿಜವಾದ ವಿರೋಧ ಪಕ್ಷದ ನಾಯಕ – ವಿಧಾನಸಭೆಯಲ್ಲಿ ಕುರ್ಚಿ ಬದಲಾಯಿಸಿದ್ದಕ್ಕೆ ಯತ್ನಾಳ್ ಗುಡುಗು!

ಬೆಳಗಾವಿ : ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಿಧಾನಸಭೆಯಲ್ಲಿ ಸ್ಥಾನ (ಕುರ್ಚಿ) ಬದಲಾವಣೆ ವಿಚಾರವಾಗಿ ಸ್ಪೀಕರ್ ಮತ್ತು ಆಡಳಿತ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ, ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಎದುರೇ, “ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ನಾನೇ,” ಎಂದು ಹೇಳಿ ಎಲ್ಲರ ಗಮನ ಸೆಳೆದರು.

ತಮ್ಮ ಆಸನದ ಸ್ಥಾನ ಬದಲಾಯಿಸಿದ್ದಕ್ಕೆ ಪ್ರತಿಕ್ರಿಯಿಸಿದ ವಿಜಯಪುರ ಶಾಸಕ ಯತ್ನಾಳ್, “ನಾವೆಲ್ಲರೂ ಹಿರಿಯ ಶಾಸಕರು, ಆದರೆ ನಮ್ಮನ್ನು ಹಿಂದಕ್ಕೆ ಹಾಕಿದ್ದೀರಿ. ಇದು ಯಾವ ನ್ಯಾಯ?” ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಸನ ಬದಲಾವಣೆ ಪ್ರಸ್ತಾಪವಾದಾಗ, ಮಧ್ಯಪ್ರವೇಶಿಸಿದ ಕಾಂಗ್ರೆಸ್ ಶಾಸಕ ರಂಗನಾಥ್, “ಯತ್ನಾಳ್‌ರನ್ನು ಬಿಜೆಪಿಯವರು ಅನಾಥರನ್ನಾಗಿ ಮಾಡಿದ್ದಾರೆ. ಅವರ ಜೊತೆ ನಾವು ನಿಲ್ಲುತ್ತೇವೆ,” ಎಂದು ಕಾಲೆಳೆದರು.

ಶಾಸಕರ ಆಕ್ಷೇಪಕ್ಕೆ ಸ್ಪೀಕರ್ ಯು.ಟಿ. ಖಾದರ್ ಅವರು ಸ್ಪಷ್ಟನೆ ನೀಡಿ ತಿರುಗೇಟು ನೀಡಿದರು. “ರಾಜಕೀಯದಲ್ಲಿ ಸೀನಿಯರ್, ಜೂನಿಯರ್ ಅಂತಿಲ್ಲ. ಅಧಿಕಾರದಲ್ಲಿದ್ದಾಗ ಸೀನಿಯರ್, ಇಲ್ಲದಿದ್ದಾಗ ಜೂನಿಯರ್. ಶಾಸಕರ ಸಂಖ್ಯಾಬಲ ನೋಡಿಕೊಂಡು ಸೀಟು ಕೊಡೋದು. ನಿಮಗೆ ಬೇಕಾದಾಗ ಇಲ್ಲಿ ಇರುತ್ತೀರಾ, ಬೇಡ ಅಂದಾಗ ಅಲ್ಲಿಗೆ ಹೋಗ್ತೀರಿ,” ಎಂದು ಯತ್ನಾಳ್‌ಗೆ ತಿವಿದರು.

ಸ್ಪೀಕರ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಯತ್ನಾಳ್, “ಬೇಕಾದಾಗ ಅಂತಾ ಅಲ್ಲ, ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ.ಈ ಸದನದಲ್ಲಿ ನಿಜವಾದ ವಿರೋಧ ಪಕ್ಷದ ನಾಯಕ ಅಂದರೆ ನಾನೇ ನಾನು ಅಡ್ಜಸ್ಟ್‌ಮೆಂಟ್ ರಾಜಕಾರಣಿ ಅಲ್ಲ.  ನಾನೇನು ಸಿಎಂ ಮನೆಗೆ ಹೋಗಿಲ್ಲ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎದುರಲ್ಲೇ ನಾನೇ ನಿಜವಾದ ವಿರೋಧ ಪಕ್ಷದ ನಾಯಕ ಎಂದು ಟಾಂಗ್ ಕೊಟ್ಟರು.

ಇದನ್ನೂ ಓದಿ : ಬೆಚ್ಚಿ ಬಿದ್ದ ಹಾಸನ.. ನಶೆ ಏಟಲ್ಲಿ ಯುವಕನ ಬರ್ಬರ ಹತ್ಯೆ – ಶವದ ಮುಂದೆ ಸೆಲ್ಫಿ ವಿಡಿಯೋ ಮಾಡಿದ ಕಿರಾತಕ!

Btv Kannada
Author: Btv Kannada

Read More