ಮಂಡ್ಯ ಸಿಟಿ ಕ್ಲಬ್ ಒತ್ತುವರಿ ಪ್ರಕರಣ – DC ಸೇರಿ 9 ಅಧಿಕಾರಿಗಳಿಗೆ ಹೈಕೋರ್ಟ್ ನೋಟಿಸ್!

ಮಂಡ್ಯ : ಮಂಡ್ಯ ನಗರದ ಅತ್ಯಂತ ಹಳೆಯ ಸಂಸ್ಥೆಯಾದ ಸಿಟಿ ಕ್ಲಬ್ ಒತ್ತುವರಿ ಮಾಡಿಕೊಂಡಿರುವ ಆರೋಪದ ಮೇಲೆ ನಗರಸಭೆ (CMC)ಗೆ ಸೇರಿದ ಸುಮಾರು 54,000 ಚದರ ಅಡಿ ಜಾಗದ ಕುರಿತು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಜಿಲ್ಲಾಧಿಕಾರಿ (DC) ಸೇರಿದಂತೆ ಒಟ್ಟು ಒಂಬತ್ತು ಅಧಿಕಾರಿಗಳಿಗೆ ಹೈಕೋರ್ಟ್‌ನ ವಿಭಾಗೀಯ ಪೀಠ ನೋಟಿಸ್ ಜಾರಿ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಎಸ್. ಸಂಜಯ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ನಡೆಸಿದ ನ್ಯಾಯಾಲಯವು ಈ ನಿರ್ದೇಶನ ನೀಡಿದೆ. ಒತ್ತುವರಿಯಾಗಿರುವ ನಗರಸಭೆಯ ಜಾಗವನ್ನು ತೆರವುಗೊಳಿಸಿ, ಅದನ್ನು ಸಿಎಂಸಿ ವಶಕ್ಕೆ ನೀಡುವಂತೆ ಅರ್ಜಿದಾರರು ಕೋರಿದ್ದರು.

ಸಿಟಿ ಕ್ಲಬ್ ಮಂಡ್ಯ ನಗರಸಭೆ ಕಚೇರಿ ಮತ್ತು ಮುನ್ಸಿಪಲ್ ಹೈಸ್ಕೂಲ್ ನಡುವೆ ಇದೆ. ಈ ಕ್ಲಬ್ ಆಕ್ರಮಿಸಿಕೊಂಡಿರುವ 54,000 ಚದರ ಅಡಿ ಜಾಗವು ನಗರಸಭೆಗೆ ಸೇರಿದ್ದು, ಕ್ಲಬ್‌ಗೆ ಯಾವುದೇ ಮಂಜೂರಾತಿ ನೀಡಿಲ್ಲ ಎಂದು ಪಿಐಎಲ್‌ನಲ್ಲಿ ಉಲ್ಲೇಖಿಸಲಾಗಿದೆ. 2003ರಲ್ಲಿ ಸಿಟಿ ಕ್ಲಬ್ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾದಾಗ, ನಗರಸಭೆಯು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯವು, ಹೊಸ ಕಟ್ಟಡ ಅಕ್ರಮ ಎಂದು ತೀರ್ಪು ನೀಡಿ, ಜಾಗವನ್ನು ವಶಕ್ಕೆ ಪಡೆಯಲು ಸಿಎಂಸಿಗೆ ಆದೇಶಿಸಿತ್ತು. ಕೋರ್ಟ್ ಆದೇಶದ ಹೊರತಾಗಿಯೂ ನಗರಸಭೆ ಕ್ರಮ ಕೈಗೊಳ್ಳಲು ವಿಫಲವಾಗಿದೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರುಗಳು ದಾಖಲಾಗಿವೆ. ಇದರ ಬೆನ್ನಲ್ಲೇ, ಸಿಎಂಸಿ ಆಯುಕ್ತರಾದ ಪಂಪಶ್ರೀ ಅವರು ಕೋರ್ಟ್ ನಿರ್ದೇಶನದಂತೆ ಕ್ರಮ ಕೈಗೊಳ್ಳುವುದಾಗಿ ಲೋಕಾಯುಕ್ತಕ್ಕೆ ಪ್ರಮಾಣಪತ್ರ ಸಲ್ಲಿಸಿದ್ದರು.

ಅರ್ಜಿದಾರರು 2025ರ ಜನವರಿ 1ರಂದು ನಗರಸಭೆಗೆ ದೂರು ನೀಡಿ, ಸಾರ್ವಜನಿಕ ಆಸ್ತಿಯಲ್ಲಿ ಜೂಜು ಮತ್ತು ಮದ್ಯಪಾನ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಕೂಡಲೇ ಆಸ್ತಿಯನ್ನು ವಶಕ್ಕೆ ಪಡೆಯಲು, ಮದ್ಯದ ಪರವಾನಗಿ ರದ್ದುಗೊಳಿಸಲು ಮತ್ತು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಸಿಎಂಸಿ ಆಯುಕ್ತರು ಮಾರ್ಚ್ 13, 2025ರಂದು ಕ್ಲಬ್‌ಗೆ ನೋಟಿಸ್ ಜಾರಿ ಮಾಡಿ, ಆಸ್ತಿಯ ಮೂಲ ದಾಖಲೆಗಳನ್ನು ಸಲ್ಲಿಸಲು ಕೇಳಿದ್ದರು.

ಪ್ರಕರಣದ ಗಂಭೀರತೆ ಪರಿಗಣಿಸಿರುವ ಹೈಕೋರ್ಟ್, ಒಂಬತ್ತು ಪಕ್ಷಗಳಿಗೆ ನೋಟಿಸ್ ಜಾರಿ ಮಾಡಿದೆ, ಸರ್ಕಾರದ ಕಾರ್ಯದರ್ಶಿ, ಮಂಡ್ಯ ಜಿಲ್ಲಾಧಿಕಾರಿ (DC), ಪೌರಾಡಳಿತ ನಿರ್ದೇಶಕರು, ಮಂಡ್ಯ ಅಬಕಾರಿ ಉಪ ಆಯುಕ್ತರು, ಅಬಕಾರಿ ನಿರೀಕ್ಷಕ, ರಾಜ್ಯ ಅಬಕಾರಿ ಇಲಾಖೆ, ಸಿಟಿ ಕ್ಲಬ್, ಮಂಡ್ಯ ನಗರಸಭೆ (CMC), ಸಹಕಾರ ಸಂಘಗಳ ರಿಜಿಸ್ಟ್ರಾರ್, ನ್ಯಾಯಾಲಯದ ಈ ಕ್ರಮವು ಮಂಡ್ಯ ನಗರಸಭೆ ಜಾಗದ ಒತ್ತುವರಿ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಅಧಿಕಾರಿಗಳ ವಿರುದ್ಧ ನೋಟಿಸ್ ಜಾರಿ ಮಾಡಿದೆ.

ಇದನ್ನೂ ಓದಿ : ಮಹಿಳಾ ನೌಕರರ ಋತುಚಕ್ರ ರಜೆ ಆದೇಶಕ್ಕೆ ಹೈಕೋರ್ಟ್​​ ತಡೆ!

Btv Kannada
Author: Btv Kannada

Read More