ನವದೆಹಲಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಆಡಗಲ್ ಗ್ರಾಮದ ಯೋಧ ದುರ್ಗಪ್ಪ ಮಾದರ (33) ಅವರು ಹುತಾತ್ಮರಾಗಿದ್ದಾರೆ. ಕರ್ತವ್ಯದ ಮೇಲೆ ಅಪಘಾತಕ್ಕೀಡಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರು ದೆಹಲಿಯ ಆರ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಅವರು 2010 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾಗಿ, ಬೆಂಗಳೂರು ಮತ್ತು ಅಲಹಾಬಾದ್‌ನಲ್ಲಿ ಸೇವೆ ಸಲ್ಲಿಸಿದ ಬಳಿಕ ಇತ್ತೀಚೆಗೆ ದೆಹಲಿ ಆರ್ಮಿ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಡಿಸೆಂಬರ್ 10 ರಂದು ತಮ್ಮ ಸ್ವಗ್ರಾಮ ಆಡಗಲ್‌ಗೆ ಆಗಮಿಸಲು ಯೋಧ ದುರ್ಗಪ್ಪ ಮಾದರ ರಜೆ ಪಡೆದಿದ್ದರು. ಕೋನಮ್ಮದೇವಿ ಕಾರ್ತಿಕೋತ್ಸವದಲ್ಲಿ ಭಾಗವಹಿಸುವ ಉದ್ದೇಶದಿಂದ ಅವರು ಗ್ರಾಮಕ್ಕೆ ಬರುತ್ತಿದ್ದರು. ಆದರೆ, ವಿಧಿಯಾಟದಿಂದಾಗಿ ರಜೆ ಮೇಲೆ ಬರುವ ಮುನ್ನವೇ ಅಪಘಾತಕ್ಕೆ ಬಲಿಯಾಗಿದ್ದಾರೆ.

ಯೋಧ ದುರ್ಗಪ್ಪ ಮಾದರ ಅವರ ನಿಧನದಿಂದ ಕುಟುಂಬದವರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ಮೃತ ಯೋಧನಿಗೆ ಪತ್ನಿ ಪೂಜಾ, ಸಹೋದರಿ ಮತ್ತು ತಾಯಿ ಇದ್ದಾರೆ. ಯೋಧ ದುರ್ಗಪ್ಪ ಮಾದರ ಅವರ ಪಾರ್ಥಿವ ಶರೀರವು ಇಂದು ರಾತ್ರಿ ಅವರ ಸ್ವಗ್ರಾಮವಾದ ಆಡಗಲ್‌ಗೆ ಆಗಮಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ : ಬೆಳಗಾವಿ ಚಳಿಗಾಲದ ಅಧಿವೇಶನ – ಅಗಲಿದ ಗಣ್ಯರಿಗೆ ವಿಧಾನ ಪರಿಷತ್‌ನಲ್ಲಿ ಸಂತಾಪ!







