ಬೆಂಗಳೂರು : ಕರ್ನಾಟಕದ ಸಿಎಂ ಕುರ್ಚಿ ಫೈಟ್ ವಿಚಾರ ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ನೇತೃತ್ವದ ಸಭೆಯಲ್ಲೂ ಚರ್ಚೆಯಾಗಿದ್ದು, ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗ್ತಾರೆ ಎಂಬ ಬಗ್ಗೆ ಮಾತುಕತೆ ನಡೆಸಲಾಗಿದೆ. AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, AICC ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆ ಸೋನಿಯಾ ಗಾಂಧಿ ಚರ್ಚೆ ನಡೆಸಿದ್ದಾರೆ. ಇದೀಗ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಾಗಿರುವುದಾಗಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದೇ ಆದಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಬೆಂಬಲಿಸುವುದಾಗಿಯೂ, ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ. ಈ ಮೂಲಕ ಹೈಕಮಾಂಡ್ ಒಪ್ಪಿದ್ರೆ ರಾಜ್ಯದ ಇತಿಹಾಸದಲ್ಲೇ ಮೊಟ್ಟ ಮೊದಲ ‘ದಲಿತ ಮುಖ್ಯಮಂತ್ರಿ’ ಡಾ. ಜಿ ಪರಮೇಶ್ವರ್ ಆಗುವ ಸಾಧ್ಯತೆಯಿದೆ.

ಮೊನ್ನೆ ಮಂಗಳೂರಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ವಿಸ್ತೃತ ಸಭೆಗಳನ್ನು ನಡೆಸಿದ ಸಿದ್ದರಾಮಯ್ಯ, ನಂತರ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ ಸಿ ವೇಣುಗೋಪಾಲ್ ಅವರೊಂದಿಗೆ ಸಂವಾದ ನಡೆಸಿದ ನಂತರ, ಅಧಿಕಾರಕ್ಕೆ ಅಂಟಿಕೊಳ್ಳುವ ಬಯಕೆ ಇಲ್ಲ ಎಂದು ಪುನರುಚ್ಚರಿಸಿದ್ದಾರೆ. ಪಕ್ಷವು ಹೊಸ ನಾಯಕತ್ವವನ್ನು ತರಲು ನಿರ್ಧರಿಸಿದರೆ, ದಲಿತರಾದ ಗೃಹ ಸಚಿವ ಜಿ ಪರಮೇಶ್ವರ ಅವರ ಉಮೇದುವಾರಿಕೆಯನ್ನು ಬೆಂಬಲಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಶನಿವಾರ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಸೋನಿಯಾ ಗಾಂಧಿ ಸೇರಿದಂತೆ ಉನ್ನತ ಕಾಂಗ್ರೆಸ್ ನಾಯಕತ್ವವು ಕರ್ನಾಟಕದ ಪರಿಸ್ಥಿತಿಯ ಕುರಿತು ವಿವರವಾದ ಮಾಹಿತಿ ಪಡೆದುಕೊಂಡಿದೆ.

“ಸಿಎಂ ಬದಲಾವಣೆ ಬಗ್ಗೆ ರಾಹುಲ್ ಗಾಂಧಿ ಅವರಿಂದ ಒಂದು ಫೋನ್ ಕರೆ ಬಂದರೂ ಸಾಕು” ಎಂದು ಸಿಎಂ ಸಿದ್ದು ಹೇಳಿದ್ದಾರೆ ಎನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ, ಸಿದ್ದರಾಮಯ್ಯ ಅವರು ಪರಮೇಶ್ವರ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಮತ್ತು ಮಾಜಿ ಸಚಿವ ಕೆ.ಎನ್. ರಾಜಣ್ಣ ಸೇರಿದಂತೆ ತಮ್ಮ ಆಪ್ತರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಈ ಸಭೆಗಳಲ್ಲಿ, ಸಿಎಂ ಪರಮೇಶ್ವರ ಅವರನ್ನು ಬೆಂಬಲಿಸಿದ್ದಾರೆ ಎಂದು ಹೇಳಲಾಗುತ್ತದೆ. 2013ರಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ಗೆದ್ದು ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾದಾಗ ಪರಮೇಶ್ವರ್ ಅವರು ರಾಜ್ಯ ಅಧ್ಯಕ್ಷರಾಗಿದ್ದರು. ಈ ಹಿಂದೆಯೂ ಸಹ, ದಲಿತ ಸಮುದಾಯದ ಯಾರಿಗಾದರೂ ಅಧಿಕಾರ ವಹಿಸಿಕೊಳ್ಳಲು ತಾವು ಬಯಸುವುದಾಗಿ ಸಿಎಂ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷೆಗಳನ್ನು ಸಾಕಾರಗೊಳಿಸಲು ಇತರ ಹಿರಿಯ ನಾಯಕರ ಬೆಂಬಲ ಅತ್ಯಗತ್ಯ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ. ಈ ಸಂದೇಶವೇ ಶಿವಕುಮಾರ್ ಅವರು ಸಿದ್ದರಾಮಯ್ಯ ನಿಷ್ಠಾವಂತ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಎರಡು ಬಾರಿ ಭೇಟಿಯಾಗಲು ಕಾರಣ ಎನ್ನಲಾಗುತ್ತಿದೆ. ಇದಾದ ನಂತರ ಹಿರಿಯ ಲಿಂಗಾಯತ ನಾಯಕರಾದ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್ ಅವರೊಂದಿಗೆ ಮುಖಾಮುಖಿ ಸಭೆ ನಡೆಯಿತು.
ಅಂತಿಮವಾಗಿ ಕರ್ನಾಟಕ ಸಿಎಂ ಕುರ್ಚಿ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಸಭೆ ಸೇರಿ ಎಲ್ಲಾ ಅಂತೆ ಕಂತೆಗಳನ್ನು ಸ್ಪಷ್ಟವಾಗಿ ಬಗೆಹರಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ‘ಡೆವಿಲ್’ ಕ್ವೀನ್ ರಚನಾ ರೈ ಈಗ ಪ್ರತಿಷ್ಠಿತ ನವರತ್ನ ಆಭರಣದ ಬ್ರ್ಯಾಂಡ್ ಅಂಬಾಸಿಡರ್!







