ಬೆಂಗಳೂರು : ರಾಜಾಜಿನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆ ಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ಭವ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಆಚರಿಸಲಾಯಿತು. ಇಡೀ ದಿನ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ತಾಯಿಯ ಗೌರವವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮದಲ್ಲಿ ಕವಿ, ಲೇಖಕ ಬಿ.ಆರ್. ಲಕ್ಷ್ಮಣ್ ರಾವ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ, ನಮ್ಮ ಹೃದಯದ ನೋಟ, ನಮ್ಮ ಜೀವನದ ನಡಿಗೆ. ಯುವ ಜನಾಂಗ ಕನ್ನಡವನ್ನು ಅರ್ಥಮಾಡಿಕೊಂಡು ಅದರಲ್ಲಿ ಹೆಮ್ಮೆಯನ್ನು ಹೊತ್ತು ನಡೆಯಬೇಕು ಎಂದು ಕರೆ ನೀಡಿದರು.

ಈ ವಿಶೇಷ ಸಂದರ್ಭದಲ್ಲಿ ಬಿ.ಆರ್. ಲಕ್ಷ್ಮಣ್ ರಾವ್ ಅವರಿಗೆ “ಇ.ಎಸ್.ಐ.ಸಿ ಕನ್ನಡ ರತ್ನ 2025” ಪ್ರಶಸ್ತಿ ಪ್ರದಾನ ಮಾಡಲಾಯಿತು. ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ ಜಿತೇಂದ್ರ ಕುಮಾರ್ ಜೆ.ಎಂ ಮಾತನಾಡಿ, ಭಾಷೆ ಯಾವುದೇ ಸಮುದಾಯದ ಆತ್ಮ. ಕನ್ನಡ ನಮ್ಮ ನಾಡಿನ ನಾಡಿ, ಅದನ್ನು ಕಾಪಾಡುವುದು ಮತ್ತು ಯುವಪೀಳಿಗೆಯ ಜವಾಬ್ದಾರಿಯಾಗಿದೆ. ಅದರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ರಾಜ್ಯೋತ್ಸವವು ನಾಡಿನ ಪರಂಪರೆ, ಸಂಸ್ಕೃತಿ, ಐಕ್ಯತೆ ಮತ್ತು ಕನ್ನಡಿಗನ ಹೆಮ್ಮೆಯನ್ನು ತೋರಿಸುವ ಮಹತ್ವದ ದಿನ ಎಂದು ಇ.ಎಸ್.ಐ.ಸಿ ವೈದ್ಯಕೀಯ ಅಧೀಕ್ಷಕ ಡಾ. ಪ್ರಸಾದ್ ಸಿ.ಜಿ.ಎಸ್ ಹೇಳಿದರು.

ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರಾದ ರಾಮ್ ರಾಜ್ ಮೀನಾ, ಕನ್ನಡ ರಾಜ್ಯೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಗಿರೀಶ್ ಎಂ.ಎಸ್, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಸುಧಾಕರ್ ಜಿ, ಮನೋಂಜನಾ ಕೂಟದ ಪ್ರಧಾನ ಕಾರ್ಯದರ್ಶಿ ಶಾಂತಲಾ ಎಂ.ಬಿ, ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಕುಮಾರ್, ಬಿಎಂಎಸ್ ಡಿವಿ ರಾಮಮೂರ್ತಿ, ಮಿಮಿಕ್ರಿ ನಟ ಗೋಪಿ, ರಾಜ್ಯೋತ್ಸವ ಸಮಿತಿ ಮತ್ತು ಮನರಂಜನಾ ಕ್ಲಬ್‌ನ ಎಲ್ಲಾ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : ಪೀಟರ್ ಚಿತ್ರದ ‘ತಾಯೆ ತಾಯೇ’ ಎಮೋಷನ್ ಸಾಂಗ್ ರಿಲೀಸ್!







