ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಕ್ಕೆ ಹೆದರಿ ವ್ಯಕ್ತಿ ಆತ್ಮಹತ್ಯೆ!

ಹಾವೇರಿ : ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದಕ್ಕೆ ಮಾನಸಿಕವಾಗಿ ನೊಂದು, ಮರ್ಯಾದೆಗೆ ಹೆದರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯಲ್ಲಿ ನಡೆದಿದೆ. ವೆಂಕಟಾಪೂರ ಗ್ರಾಮದ ನಿವಾಸಿ ದಾದಾಪೀರ್ (38) ಆತ್ಮಹತ್ಯೆಗೆ ಶರಣಾದ ವ್ಯಕ್ತಿ.

ದಾದಾಪೀರ್ ವಿರುದ್ಧ ಠಾಣೆಯಲ್ಲಿ ದೂರು ದಾಖಲಾಗಿದ್ದಕ್ಕೆ ಭಯಗೊಂಡು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ದಾದಾಪೀರ್ ಅವರ ಸಹೋದರ ಮೊಹಮ್ಮದ್ ರಫೀಕ್ ಮತ್ತು ಅವರ ಪತ್ನಿ ನೂರುಬೇಬಿ ನಡುವೆ ಕಲಹವಿತ್ತು. ಈ ಕಲಹದ ಹಿನ್ನೆಲೆಯಲ್ಲಿ, ನೂರುಬೇಬಿ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ದೂರಿನಲ್ಲಿ ನೂರುಬೇಬಿ ಅವರು ಪತಿ ರಫೀಕ್ ಸೇರಿದಂತೆ ಕುಟುಂಬದ ಒಟ್ಟು 11 ಜನರ ವಿರುದ್ಧ ದೂರು ದಾಖಲಿಸಿದ್ದರು. ದೂರು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ಮನೆಗೆ ತೆರಳಿ ಸ್ಥಳ ಮಹಜರು ಕೂಡ ನಡೆಸಿದ್ದರು. ಸ್ಥಳ ಮಹಜರು ನಡೆಸುವ ಸಂದರ್ಭದಲ್ಲಿ ಪೊಲೀಸರು ಮೃತ ದಾದಾಪೀರ್ ಅವರನ್ನು ಠಾಣೆಗೆ ವಿಚಾರಣೆಗೆ ಬರುವಂತೆ ಕರೆದಿದ್ದರು. ಇದರಿಂದ ಭಯಗೊಂಡಿದ್ದ ದಾದಾಪೀರ್, ಮನೆಯವರೊಂದಿಗೆ ಚರ್ಚಿಸಿದ್ದು, ಪೊಲೀಸ್ ಠಾಣೆಗೆ ಹೋದರೆ ಮರ್ಯಾದೆ ಹೋಗುತ್ತದೆ ಎಂದು ಹೆದರಿದ್ದರು. ಹೆದರಿ ಮನೆಯಲ್ಲಿ ಯಾರೂ ಇಲ್ಲದ ಸಮಯಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ದಾದಾಪೀರ್ ಅವರ ಸಾವಿಗೆ ನೂರುಬೇಬಿ ಅವರ ಕುಟುಂಬಸ್ಥರೇ ಕಾರಣ ಎಂದು ಮೃತರ ಕುಟುಂಬದವರು ಆರೋಪಿಸಿದ್ದಾರೆ. ಈ ಕುರಿತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿಯಲ್ಲಿ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ‘ಗುಮ್ಮಡಿ ನರಸಯ್ಯ’ ಬಯೋಪಿಕ್ ಚಿತ್ರದ ಅದ್ಧೂರಿ ಮುಹೂರ್ತ – ತೆಲುಗಿನಲ್ಲಿ ಶಿವಣ್ಣ ಹವಾ ಶುರು!

Btv Kannada
Author: Btv Kannada

Read More