ನ್ಯಾಷನಲ್ ಹೆರಾಲ್ಡ್ ಕೇಸ್ – ಡಿಸಿಎಂ ಡಿಕೆಶಿಗೆ ದೆಹಲಿ ಪೊಲೀಸ್ ನೋಟಿಸ್!

ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಅವರ ಸಹೋದರ ಡಿ.ಕೆ.ಸುರೇಶ್​ಗೆ ದೆಹಲಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಪ್ರಕರಣದ ಕುರಿತು ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಮತ್ತು ಡಿ.ಕೆ.ಸುರೇಶ್ ಗೆ ನೋಟಿಸ್‌ ಜಾರಿ ಮಾಡಿದೆ.

ನ. 29 ರಂದು ನೀಡಲಾದ ನೋಟಿಸ್ ಪ್ರಕಾರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಡಿ. 19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಥವಾ ಕೋರಲಾದ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ.

ಡಿ.ಕೆ.ಶಿವಕುಮಾ‌ರ್ ವೈಯಕ್ತಿಕ ಮತ್ತು ರಾಜಕೀಯ ಹಿನ್ನೆಲೆ, ಕಾಂಗ್ರೆಸ್ ಜೊತೆಗಿನ ಅವರ ಸಂಬಂಧ, ಅವರು ವರ್ಗಾಯಿಸಿದ್ದಾರೆ ಎನ್ನಲಾದ ಹಣದ ಸಂಪೂರ್ಣ ವಿವರ ಅಥವಾ ಯಂಗ್ ಇಂಡಿಯಾ ಜೊತೆಗಿನ ನಂಟಿನ ಬಗ್ಗೆ ಆದಾಯ ತೆರಿಗೆ ಸಲ್ಲಿಕೆಗಳು, ಹಣಕಾಸು ಹೇಳಿಕೆಗಳು ಮತ್ತು ವಹಿವಾಟುಗಳಿಗೆ ಸಂಬಂಧಿಸಿದ ದೇಣಿಗೆ ಪ್ರಮಾಣಪತ್ರಗಳ ಸಂಪೂರ್ಣ ವಿವರಗಳನ್ನು ಡಿ.19ರೊಳಗೆ ಸಲ್ಲಿಸುವಂತೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ಕೋರಿದೆ.

ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಡಿ.ಕೆ. ಶಿವಕುಮಾರ್ ವೈಯಕ್ತಿಕವಾಗಿ 25 ಲಕ್ಷ ದೇಣಿಗೆ ನೀಡಿದ್ದಾರೆ ಹಾಗೂ ಅವರ ಟ್ರಸ್ಟ್ ಮೂಲಕ 2 ಕೋಟಿ ನೀಡಲಾಗಿದೆ ಎಂದು ED ಆರೋಪಪಟ್ಟಿಯಲ್ಲಿ ಈ ಹಿಂದೆ ಉಲ್ಲೇಖಿಸಿತ್ತು. ಶಿವಕುಮಾರ್ ಅವರು ಯಂಗ್ ಇಂಡಿಯನ್ ಮತ್ತು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಈ ಮೊತ್ತ ಪಾವತಿಸಿದ್ದಾರೆ ಎಂದೂ ತಿಳಿಸಿತ್ತು. ಸುರೇಶ್ ಅವರು ಯಂಗ್ ಇಂಡಿಯನ್ ಸಂಸ್ಥೆಗೆ 25 ಲಕ್ಷ ದೇಣಿಗೆ ನೀಡಿದ್ದರು.

ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ 2014ರ ಜೂನ್ 26ರಂದು ದಾಖಲಿಸಿದ ಖಾಸಗಿ ದೂರನ್ನು ಪಟಿಯಾಲಾ ಹೌಸ್ ನ್ಯಾಯಾಲಯದ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟರು ಪರಿಗಣನೆಗೆ ತೆಗೆದುಕೊಂಡ ನಂತರ, ಇ.ಡಿ ತನಿಖೆಯು 2021ರಲ್ಲಿ ಶುರುವಾಗಿತ್ತು.

ಸೋನಿಯಾ, ರಾಹುಲ್, ಸ್ಯಾಮ್ ಪಿತ್ರೋಡಾ, ಕಾಂಗ್ರೆಸ್ ಮುಖಂಡರಾಗಿದ್ದ ಮೋತಿಲಾಲ್ ವೋರಾ ಮತ್ತು ಆಸ್ಕ‌ರ್ ಫರ್ನಾಂಡಿಸ್‌, ಖಾಸಗಿ ಕಂಪನಿಯಾದ ಯಂಗ್ ಇಂಡಿಯಾ ಮತ್ತು ಕೆಲವು ಪ್ರಮುಖ ರಾಜಕೀಯ ವ್ಯಕ್ತಿಗಳು ಕ್ರಿಮಿನಲ್‌ ಪಿತೂರಿ ನಡೆಸಿದ್ದನ್ನು ದೂರಿನಲ್ಲಿ ಎತ್ತಿ ತೋರಿಸಲಾಗಿತ್ತು. ಇವರೆಲ್ಲ, ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ ಸೇರಿದ ₹2,000 ಕೋಟಿ ಬೆಲೆಬಾಳುವ ಆಸ್ತಿಗಳನ್ನು ಸ್ವಾಧೀನಕ್ಕೆ ಪಡೆಯಲು ಹಣದ ಅಕ್ರಮ ವರ್ಗಾವಣೆ ಮಾಡಿದ್ದರು ಎಂಬುದಾಗಿ ದೂರಿನಲ್ಲಿ ಹೇಳಲಾಗಿದೆ ಎಂದು ಇ.ಡಿ ಉಲ್ಲೇಖಿಸಿತ್ತು.

ಇದನ್ನೂ ಓದಿ : ಇಂದಿನಿಂದ ಮಂಡ್ಯದಲ್ಲಿ 3 ದಿನ ಕೃಷಿ ಮೇಳ.. ಸಿಎಂ ಸಿದ್ದರಾಮಯ್ಯ ಉದ್ಘಾಟನೆ.. 350 ಸ್ಟಾಲ್ ಮೂಲಕ ಜಾಗೃತಿ!

Btv Kannada
Author: Btv Kannada

Read More