ಬೆಂಗಳೂರು : ಕನಸಿನ ಮನೆಗೆ ಅತಿಥಿಗಳನ್ನು ಕರ್ಸೋ ಮುನ್ನ ತಿಥಿ ಊಟ ಹಾಕಿಸ್ತಾರೆ ಹುಷಾರ್ ಆಗಿರಿ. ಬೆಂಗಳೂರಿನಲ್ಲಿ ಕನಸಿನ ಮನೆ ಕಟ್ಟುವ ಆಸೆಯೇ ಟೆಕ್ಕಿಯೊಬ್ಬರಿಗೆ ಮಸಣದ ದಾರಿ ತೋರಿಸಿರುವ ಘಟನೆ ನಡೆದಿದೆ. ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯಲ್ಲಿ ನೆರೆಹೊರೆಯವರ ನಿರಂತರ ಕಿರುಕುಳ ಮತ್ತು ಹಣದ ಬೇಡಿಕೆಗೆ ಬೇಸತ್ತ ಟೆಕ್ಕಿ ಮುರುಳಿ ಎಂಬುವವರು ತಮ್ಮ ನಿರ್ಮಾಣ ಹಂತದ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಟೆಕ್ಕಿ ಮುರುಳಿ ವೈಟ್‌ಫೀಲ್ಡ್‌ನ ನಲ್ಲೂರಹಳ್ಳಿಯಲ್ಲಿ ಗ್ರೌಂಡ್ ಪ್ಲಸ್ ನಾಲ್ಕು ಅಂತಸ್ತಿನ ಮನೆಯನ್ನು ನಿರ್ಮಿಸುತ್ತಿದ್ದರು. ಆದರೆ, ಅವರ ನೆರೆಹೊರೆಯವರಾದ ಉಷಾ ನಂಬಿಯಾರ್ ಮತ್ತು ಅವರ ಪತಿ ಶಶಿ ನಂಬಿಯಾರ್ ದಂಪತಿಗಳು ಮುರುಳಿ ಅವರ ಮನೆ ಪ್ಲ್ಯಾನಿಂಗ್ ಸರಿಯಿಲ್ಲ ಎಂದು ಆರೋಪಿಸಿ ಕಿರುಕುಳ ನೀಡಲು ಆರಂಭಿಸಿದ್ದರು. ಕಿರಾತಕ ದಂಪತಿಗಳು, ಮುರುಳಿಗೆ ನಿರಂತರ ಟಾರ್ಚರ್ ನೀಡುವುದಲ್ಲದೆ, RTI ಅಸ್ತ್ರವನ್ನು ಹಿಡಿದು GBAಗೆ ದೂರು ಸಲ್ಲಿಸಿದ್ದರು.

ದೂರನ್ನು ಹಿಂಪಡೆಯಲು ಮತ್ತು ಇನ್ನು ಮುಂದೆ ಯಾವುದೇ ತಕರಾರು ಮಾಡದಿರಲು ಮುರುಳಿ ಅವರಿಂದ ಬರೋಬ್ಬರಿ 20 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ತೀವ್ರ ಒತ್ತಡಕ್ಕೆ ಒಳಗಾದ ಮುರುಳಿ ಅವರು ಹೇಗೋ ಕಣ್ಣೀರು ಹಾಕಿಕೊಂಡೇ 5 ಲಕ್ಷ ಕೊಡಲು ಒಪ್ಪಿಕೊಂಡಿದ್ದರು. ಆದರೆ, ಮುರುಳಿ 5 ಲಕ್ಷ ಕೊಡೋಕೆ ಒಪ್ಪಿಕೊಂಡಾಗ ಉಷಾಳ ಕಾಟ ಮತ್ತಷ್ಟು ಜಾಸ್ತಿ ಆಗುತ್ತೆ. ಅಷ್ಟೇ ಅಲ್ಲ, ಮುರುಳಿ ಅವರ ಮನೆಯನ್ನು ಸಂಪೂರ್ಣವಾಗಿ ಡೆಮಾಲಿಷ್ ಮಾಡುವುದಾಗಿ ಪಣ ತೊಟ್ಟಿದ್ದಳು.

ನಂತರ ಉಷಾಳ ಆಣತಿಯಂತೆಯೇ, GBA ಅಧಿಕಾರಿಗಳು ಮುರುಳಿ ಅವರ ಮನೆಗೆ ನೋಟಿಸ್ ನೀಡಿದ್ದರು. ಮನೆಯ ಒಂದು ಫ್ಲೋರ್ ಅತಿಕ್ರಮವಾಗಿ ನಿರ್ಮಾಣವಾಗಿದೆ ಮತ್ತು ಅದನ್ನು ಡೆಮಾಲಿಷ್ ಮಾಡಲಾಗುವುದು ಎಂದು ನೋಟಿಸ್‌ನಲ್ಲಿ ನಮೂದಿಸಲಾಗಿತ್ತು. ಕನಸಿನ ಮನೆಗೆ ವಿಘ್ನಗಳ ಸರಮಾಲೆ ಬಂದಿದ್ದಕ್ಕೆ ಮುರುಳಿ ಡಿಪ್ರೆಶನ್ಗೆ ಹೋಗಿದ್ದ. ನಿನ್ನೆ ಬೆಳಿಗ್ಗೆ ತಮ್ಮ ತಾಯಿಯ ಬಳಿ, ಅಮ್ಮಾ, ನಾನ್ ಕಟ್ತಿರೋ ಮನೆ ಕಡೆ ಹೋಗ್ಬರ್ತೀನಿ ಎಂದು ಹೇಳಿ ಹೋದ ಮುರುಳಿ, ಮಧ್ಯಾಹ್ನ ತಮ್ಮದೇ ನಿರ್ಮಾಣ ಹಂತದ ಮನೆಯ ಎರಡನೇ ಫ್ಲೋರ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾವಿಗೆ ಪ್ರಮುಖ ಕಾರಣರಾದ ಪಕ್ಕದ ಮನೆಯ ಶಶಿ ಮತ್ತು ಉಷಾ ನಂಬಿಯಾರ್ ದಂಪತಿಗಳ ವಿರುದ್ಧ ವೈಟ್‌ಫೀಲ್ಡ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆದರೆ ಇದುವರೆಗೂ ಪೊಲೀಸರು ಈ ಇಬ್ಬರನ್ನು ಬಂಧಿಸಿಲ್ಲ.

ಇದನ್ನೂ ಓದಿ : ಡಿಸೆಂಬರ್ 20 ರಂದು ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್!







