ಏ.17ರಂದು ಕೇಂದ್ರ ಸರ್ಕಾರದ ವಿರುದ್ಧ ನಾವೂ ಜನಾಕ್ರೋಶ ಯಾತ್ರೆ ಮಾಡ್ತೇವೆ – ಬಿಜೆಪಿಗೆ ಡಿಕೆಶಿ ಕೌಂಟರ್!

ಬೆಂಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಹಾಗೂ ರಾಜ್ಯ ಬಿಜೆಪಿಯ ದ್ವಂದ್ವ ನಿಲುವಿನ ವಿರುದ್ಧ ಇದೇ ಏ.17ರಂದು ಜಿಲ್ಲಾ ಕೇಂದ್ರಗಳು ಹಾಗೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಈ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಹೋರಾಟದ ಸ್ವರೂಪವನ್ನು ಶೀಘ್ರ ತಿಳಿಸಲಾಗುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಬಿಜೆಪಿಯ ಜನಾಕ್ರೋಶ ಯಾತ್ರೆಯ ವಿರುದ್ಧ ನಾವು ಏನಾದರೂ ಮಾಡಬೇಕಲ್ಲ. ಆರ್.ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ಕೇವಲ ರಾಜ್ಯ ಸರ್ಕಾರ ಏರಿಸಿದ ಹಾಲಿನ ದರ ಮಾತ್ರ ಕಣ್ಣಿಗೆ ಕಾಣುತ್ತಿದೆಯೇ? ಬಿಜೆಪಿ ರಾಜ್ಯದಲ್ಲಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಮಾಡುತ್ತಿರುವ ಯಾತ್ರೆ. ಬಿಜೆಪಿಯವರು ಯಾತ್ರೆ ಹೊರಟ ದಿನವೇ ಕೇಂದ್ರ ಸರ್ಕಾರದವರು ಪೆಟ್ರೋಲ್, ಡೀಸೆಲ್‌ಗೆ ತಲಾ 2 ರೂಪಾಯಿ ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಜಾಸ್ತಿ ಮಾಡಿ ಉದ್ಘಾಟನೆ ಮಾಡಿ‌, ಇವರ ಯಾತ್ರೆಗೆ ‘ಗಿಫ್ಟ್’ ಕಳಿಸಿದ್ದಾರೆ.

ಇದರ ಬಗ್ಗೆ ಜನಸಾಮಾನ್ಯರು ಮಾಡುತ್ತಿರುವ ಗುಣಗಾನವನ್ನು ಎಲ್ಲರೂ ಕೇಳಬೇಕು. ಕೇಂದ್ರ ಸರ್ಕಾರದ ವಿರುದ್ಧ ಮಾಡುತ್ತಿರುವ ಜನಾಕ್ರೋಶ ಯಾತ್ರೆ ಎಂದು ಬಿಜೆಪಿಯವರು ಬೋರ್ಡ್ ಹಾಕಿಕೊಳ್ಳಬೇಕು. ಬಿಜೆಪಿಯವರು ಪ್ರತಿಭಟನಾ ಬ್ಯಾನರ್‌ನಲ್ಲಿ ನನ್ನ ಹಾಗೂ ಸಿದ್ದರಾಮಯ್ಯ ಅವರ ಫೋಟೋಗಳನ್ನು ಹಾಕುವ ಬದಲು ಕೇಂದ್ರ ನಾಯಕರ ಫೋಟೋ ಹಾಕಿಕೊಳ್ಳಿ, ನಮ್ಮ ಬೆಲೆ ಏರಿಕೆ ಬದಲು ಬಿಜೆಪಿ ಬೆಲೆ ಏರಿಕೆಯನ್ನು ಪ್ರಶ್ನಿಸಿ. ನಿಮ್ಮ ಆಕ್ರೋಶ ನಿಮ್ಮ ನಾಯಕರ ಮೇಲಿರಲಿ ಎಂದು ಡಿಕೆಶಿ ಬಿಜೆಪಿಗರಿಗೆ ಟಾಂಗ್‌ ಕೊಟ್ಟಿದ್ದಾರೆ.

ಇನ್ನು ಸಿಎಂ ವಿರುದ್ಧ ಗಣಿ ಗುತ್ತಿಗೆ ಕಿಕ್‌ಬ್ಯಾಕ್ ಪಡೆದ ಆರೋಪ ರಾಜಕೀಯವಾಗಿ ಆರೋಪ‌ ಮಾಡಲು ಪ್ರಯತ್ನ ಮಾಡುತ್ತಿರಬಹುದು. ಇದರಲ್ಲಿ ಯಾವುದೇ ಸತ್ಯವಿಲ್ಲ. ಕಾನೂನಿನ ಚೌಕಟ್ಟು ಬಿಟ್ಟು ಯಾರೂ ಈ ರೀತಿ ಮಾಡಲು ಆಗುವುದಿಲ್ಲ. ಈ ವಿಚಾರದಲ್ಲಿ ಮುಖ್ಯಮಂತ್ರಿಯವರು ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ. ಎಲ್ಲವೂ ಸುಳ್ಳು ಆರೋಪ. ಇನ್ನು ನಿಮ್ಮ ವಿರುದ್ಧ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ. ಟನ್‌ಗಟ್ಟಲೇ ದಾಖಲೆಗಳಿವೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ. ಅವರಿಗೆ ಯಶಸ್ಸಾಗಲಿ ಎಂದು ಬೇಡಿಕೊಳ್ಳುತ್ತೇನೆ.‌ ಜೊತೆಗೆ ದಾಖಲೆಗಳನ್ನು ನೀಡಲು ಲಾರಿಯನ್ನು ಯಾವಾಗ ಕಳುಹಿಸಿ ಕೊಡಲಿ ಎಂದು ಡಿಕೆಶಿ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ : ತವರಲ್ಲಿ ಆರ್‌ಸಿಬಿಗೆ ಮತ್ತೆ ಸೋಲು – ಚಿನ್ನಸ್ವಾಮಿಯಲ್ಲಿ ಅಬ್ಬರಿಸಿದ ಕನ್ನಡಿಗ ರಾಹುಲ್‌.. ಡೆಲ್ಲಿಗೆ ಸತತ ನಾಲ್ಕನೇ ಜಯ!

Btv Kannada
Author: Btv Kannada

Read More