ಹುಬ್ಬಳ್ಳಿ : ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ) ಯಲ್ಲಿ ರಾಜ್ಯದಲ್ಲಿಯೇ ಅತೀ ದೊಡ್ಡ ಟ್ರಾನ್ಸ್‌ಫಾರ್ಮರ್ ಹಗರಣವೊಂದು ಬಯಲಾಗಿದೆ. ರೈತರಿಗೆ ವಿತರಿಸಬೇಕಿದ್ದ ಟ್ರಾನ್ಸ್‌ಫಾರ್ಮರ್‌ಗಳನ್ನು ವಿತರಿಸದೆ, ಸುಮಾರು 90 ಕೋಟಿಗೂ ಹೆಚ್ಚು ಹಣವನ್ನು ಅಧಿಕಾರಿಗಳು ಮತ್ತು ಖಾಸಗಿ ಕಂಪನಿಗಳು ಗುಳುಂ ಮಾಡಿದ್ದಾರೆ. ಇದೀಗ ಇಂಧನ ಇಲಾಖೆಯೇ ಈ ಭ್ರಷ್ಟಾಚಾರವನ್ನು ಪತ್ತೆಹಚ್ಚಿ ಸಿಐಡಿ ತನಿಖೆಗೆ ವಹಿಸಿದೆ.

ಹೆಸ್ಕಾಂನ ದಾಸ್ತಾನು ಸೂಪರ್ವೈಸರ್ ಹಿರಿಯ ಅಧಿಕಾರಿಗಳು ಹಗರಣದಲ್ಲಿ ಶಾಮೀಲಾಗಿದ್ದಾರೆ. ಕೃಷಿ ಉದ್ದೇಶಗಳಿಗಾಗಿ ಹೆಸ್ಕಾಂ ವ್ಯಾಪ್ತಿಯ ರೈತರಿಗೆ ವಿತರಿಸಲು 1,500 ಟ್ರಾನ್ಸ್‌ಫಾರ್ಮರ್‌ಗಳ ಖರೀದಿಗೆ ಇಂಧನ ಇಲಾಖೆ ಸಮ್ಮತಿ ನೀಡಿತ್ತು. ಆದರೆ, ಹೆಸ್ಕಾಂನ ಕೆಲ ಭ್ರಷ್ಟ ಅಧಿಕಾರಿಗಳು ಈ 1,500 ಟ್ರಾನ್ಸ್‌ಫಾರ್ಮರ್‌ಗಳನ್ನು ರೈತರಿಗೆ ವಿತರಿಸಲೇ ಇಲ್ಲ. ಬದಲಿಗೆ, ವಿತರಣೆಯಾಗದಿದ್ದರೂ ಕೂಡಾ ಬಿಲ್ ಸೃಷ್ಟಿಸಿ, ₹90 ಕೋಟಿಗೂ ಹೆಚ್ಚು ಹಣವನ್ನು ಗುಳುಂ ಮಾಡಿದ್ದಾರೆ.

ರೈತರ ಗದ್ದೆಗಳಿಗೆ ಹಾಕಬೇಕಿದ್ದ ಟ್ರಾನ್ಸ್‌ಫಾರ್ಮರ್ ಹಣವನ್ನು ಅಧಿಕಾರಿಗಳು ತಿಂದು ತೇಗಿದ್ದಾರೆ. ಹಳ್ಳಿಗಳ ಬದಲಿಗೆ ನಗರದ ಪ್ರದೇಶಗಳ ಲೆಕ್ಕಗಳನ್ನು ನೀಡಿ ಇಂಧನ ಇಲಾಖೆಯನ್ನು ಯಾಮಾರಿಸಲು ಭ್ರಷ್ಟ ಅಧಿಕಾರಿಗಳು ಯತ್ನಿಸಿದ್ದರು. ಇಂಧನ ಇಲಾಖೆಯ ಕಾರ್ಯಕ್ಷಮತೆಯಿಂದಲೇ ಹೆಸ್ಕಾಂನ ಈ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಾಗಿದೆ. ಇಂಧನ ಇಲಾಖೆ ಹೆಸ್ಕಾಂ ಹಗರಣವನ್ನು ಸಿಐಡಿಗೆ ವಹಿಸಿ ಇಲಾಖೆಯೊಳಗಿನ ಭ್ರಷ್ಟರ ವಿರುದ್ಧ ಸಮರ ಸಾರಿದೆ. ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ರೈತರ ಟ್ರಾನ್ಸ್‌ಫಾರ್ಮರ್‌ಗಳನ್ನೇ ನುಂಗಿದ ಹೆಸ್ಕಾಂನ ಹಲವು ಅಧಿಕಾರಿಗಳನ್ನು ಅರೆಸ್ಟ್ ಮಾಡುವ ಸಾಧ್ಯತೆಯಿದೆ.
ಹೆಸ್ಕಾಂಗೆ ಟ್ರಾನ್ಸ್‌ಫಾರ್ಮರ್ ಪೂರೈಸಿದ್ದ 9 ಖಾಸಗಿ ಕಂಪನಿಗಳ ಮೇಲೆ ಹಾಗೂ ಹೆಸ್ಕಾಂ ಅಧಿಕಾರಿಗಳ ಮನೆಗಳ ಮೇಲೆ ಏಕಕಾಲಕ್ಕೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಸ್ಕಾಂ ಟ್ರಾನ್ಸ್‌ಫಾರ್ಮರ್ ಹಗರಣದಲ್ಲಿ ಅಧಿಕಾರಿಗಳು ಭಾರೀ ಪ್ರಮಾಣದ ಕಿಕ್ ಬ್ಯಾಕ್ ಪಡೆದಿದ್ದು, ಹೆಸ್ಕಾಂ ಮತ್ತು ಕಂಪನಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ತಡೆ ಕಾಯ್ದೆಯಡಿ ತನಿಖೆ ನಡೆಸಲಾಗಿದೆ. ರೈತರ ಟ್ರಾನ್ಸ್‌ಫಾರ್ಮರ್‌ಗಳನ್ನೇ ನುಂಗಿದ ಹೆಸ್ಕಾಂನ ಹಲವು ಅಧಿಕಾರಿಗಳು ಹಾಗೂ 9 ಕಂಪನಿಗಳ ಮುಖ್ಯಸ್ಥರು ಶೀಘ್ರದಲ್ಲೇ ಬಂಧನವಾಗಿ ಜೈಲು ಸೇರುವ ಸಾಧ್ಯತೆ ಇದೆ.
ಇದನ್ನೂ ಓದಿ : ವಿವೇಕನಗರ ಪೊಲೀಸರ ವಿರುದ್ದ ಕೊಲೆ ಆರೋಪ ಕೇಸ್ – ಇನ್ಸ್‌ಪೆಕ್ಟರ್ ಶಿವಕುಮಾರ್ ಸೇರಿ ನಾಲ್ವರು ಸಸ್ಪೆಂಡ್!







