ಗ್ರಾಹಕರಿಗೆ ಹಾನಿಕಾರಕ ಆಹಾರ ಮಾರಾಟ – ಬೆಂಗಳೂರಿನ ರಾಮೇಶ್ವರಂ ಕೆಫೆ ಮಾಲೀಕ ರಾಘವೇಂದ್ರ ರಾವ್ ವಿರುದ್ಧ ಎಫ್‌ಐಆರ್ ದಾಖಲು!

ಬೆಂಗಳೂರು : ಬೆಂಗಳೂರಿನ ಫೇಮಸ್ ಹೋಟೆಲ್ ರಾಮೇಶ್ವರಂ ಕೆಫೆಯ ಪೊಂಗಲ್ ನಲ್ಲಿ ಹುಳ ಸಿಕ್ಕಿತ್ತು. ಈ ವಿಚಾರದಲ್ಲಿ ಗ್ರಾಹಕರಿಗೆ ರಾಮೇಶ್ವರಂ ಕೆಫೆ ಮಾಲೀಕರು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಈಗಾಗಲೇ ಈ ಕೇಸ್ನಲ್ಲಿ ರಾಮೇಶ್ವರಂ ಕೆಫೆ ಕೇಸ್ ದಾಖಲು ಮಾಡಿದ್ದು, ಈಗ ಗ್ರಾಹಕನಿಂದ ಪ್ರತಿದೂರು ದಾಖಲಾಗಿದೆ.

ಬಿಲ್ಡರ್ ಒಬ್ಬರು ಸಲ್ಲಿಸಿದ ದೂರಿನ ಮೇರೆಗೆ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಲ್‌) ಪೊಲೀಸರು ಕೆಫೆ ಮಾಲೀಕರಾದ ರಾಘವೇಂದ್ರ ರಾವ್, ಅವರ ಪತ್ನಿ ದಿವ್ಯಾ ರಾಘವೇಂದ್ರ ರಾವ್ ಮತ್ತು ಹಿರಿಯ ಕಾರ್ಯನಿರ್ವಾಹಕ ಸುಮಂತ್ ಲಕ್ಷ್ಮಿನಾರಾಯಣ್ ವಿರುದ್ಧ FIR ದಾಖಲಾಗಿದೆ. ಹಾನಿಕಾರಕ ಆಹಾರ ಮಾರಾಟ, ಸುಳ್ಳು ಮಾಹಿತಿ ನೀಡುವುದು, ಕ್ರಿಮಿನಲ್ ಪಿತೂರಿ, ಬೆದರಿಕೆ ಆರೋಪ, ಸೋಮವಾರ, ಈ ಮೂವರಿಗೂ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಮಾರತ್‌ಹಳ್ಳಿ ನಿವಾಸಿ ನಿಖಿಲ್ ಎನ್. ಎಂಬುವವರು ಜುಲೈ 24 ರಂದು ವಿಮಾನ ನಿಲ್ದಾಣದ ಕೆಫೆ ಔಟ್‌ಲೆಟ್ (ಟರ್ಮಿನಲ್ 1) ನಲ್ಲಿ ತಮಗೆ ನೀಡಿದ ಪೊಂಗಲ್‌ನಲ್ಲಿ ಹುಳು ಕಂಡುಬಂದಿತ್ತು ಎಂದು ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಘಟನೆ ನಡೆದಾಗ, ಸಿಬ್ಬಂದಿ ಆಹಾರವನ್ನು ಬದಲಾಯಿಸಲು ಒಪ್ಪಿಕೊಂಡರೂ, ವಿಮಾನದ ಸಮಯದ ಕಾರಣಕ್ಕೆ ನಿಖಿಲ್ ಅವರು ಅದನ್ನು ನಿರಾಕರಿಸಿದ್ದರು. ಈ ಘಟನೆಯನ್ನು ಇತರೆ ಗ್ರಾಹಕರು ಚಿತ್ರೀಕರಿಸಿದ್ದು, ಪೊಂಗಲ್‌ನಲ್ಲಿನ ಹುಳುವಿನ ಫೋಟೋಗಳನ್ನು ತೆಗೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಗ್ರಾಹಕರ ದೂರು ದಾಖಲಾಗುವ ಮೊದಲೇ ಈ ಪ್ರಕರಣಕ್ಕೆ ಮತ್ತೊಂದು ಆಯಾಮ ಸಿಕ್ಕಿತ್ತು. ಘಟನೆ ನಡೆದ ಮರುದಿನವೇ, ಕೆಫೆಯ ಕಾರ್ಯಾಚರಣೆ ಮುಖ್ಯಸ್ಥ ಸುಮಂತ್ ಲಕ್ಷ್ಮಿನಾರಾಯಣ್ ಅವರು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಗ್ರಾಹಕರ ಗುಂಪಿನ ವಿರುದ್ಧ ಬ್ಲ್ಯಾಕ್‌ಮೇಲ್ ಮತ್ತು ಸುಲಿಗೆ ಪ್ರಕರಣ ದಾಖಲಿಸಿದ್ದರು. ಗ್ರಾಹಕರು ₹25 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇದನ್ನೂ ಓದಿ :  ಮೈಸೂರಿನಲ್ಲಿ ಮತ್ತೊಂದು ಬರ್ಬರ ಕೊಲೆ – ರಾಡಿನಿಂದ ಹೊಡೆದು ವ್ಯಕ್ತಿಯ ಹತ್ಯೆ!

Btv Kannada
Author: Btv Kannada

Read More