ಬೆಂಗಳೂರು : ನಗರದ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಮಕ್ಕಳು ಸಾಮೂಹಿಕವಾಗಿ ಅನಾರೋಗ್ಯಕ್ಕೆ ತುತ್ತಾಗಿರುವ ಘಟನೆ ನಡೆದಿದೆ. ದಕ್ಷಿಣ ಬೆಂಗಳೂರಿನಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ನಲ್ಲಿ ಸುಮಾರು 206 ಮಕ್ಕಳಿಗೆ ಕರುಳು ಬೇನೆ ಸಮಸ್ಯೆ ಉಲ್ಬಣಿಸಿದ್ದು, ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಕಳೆದ ಕೆಲವು ದಿನಗಳಿಂದ ಈ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿರುವ ಮಕ್ಕಳು ವಾಂತಿ, ಭೇದಿ ಮತ್ತು ಕರುಳು ಬೇನೆಯಂತಹ ಲಕ್ಷಣಗಳಿಂದ ಬಳಲುತ್ತಿದ್ದಾರೆ. ಇದುವರೆಗೆ ಬರೋಬ್ಬರಿ 206 ಮಕ್ಕಳಲ್ಲಿ ಈ ಅನಾರೋಗ್ಯದ ಲಕ್ಷಣಗಳು ಕಂಡುಬಂದಿವೆ. ನಿವಾಸಿಗಳ ಮಾಹಿತಿ ಪ್ರಕಾರ, ಪ್ರತಿದಿನವೂ ಸರಾಸರಿ 4 ರಿಂದ 5 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಕರುಳು ಬೇನೆ ಉಲ್ಬಣಗೊಂಡಿರುವ ಈ ಎಲ್ಲಾ ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಕ್ಕಳು ಸರಣಿಯಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದಕ್ಕೆ ಕಲುಷಿತ ನೀರೇ ಕಾರಣವಿರಬಹುದು ಎಂದು ಅಪಾರ್ಟ್‌ಮೆಂಟ್ ನಿವಾಸಿಗಳು ತೀವ್ರ ಆರೋಪ ವ್ಯಕ್ತಪಡಿಸಿದ್ದಾರೆ. ಪೋಷಕರು ಈ ಸಂಬಂಧ ಅಪಾರ್ಟ್‌ಮೆಂಟ್ ಆಡಳಿತ ಮಂಡಳಿಗೆ ದೂರು ನೀಡಿದ್ದು, ಸರಿಯಾದ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಘಟನೆ ಗಂಭೀರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಸ್ಥಳೀಯ ಸರ್ಕಾರಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಿವಾಸಿಗಳ ದೂರಿನ ಮೇರೆಗೆ BBMP ಆರೋಗ್ಯ ಸಿಬ್ಬಂದಿ ತಂಡವು ಕೂಡಲೇ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದೆ. ತಂಡವು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದು, ರೋಗದ ಮೂಲ ಮತ್ತು ಹರಡುವಿಕೆಗೆ ಕಾರಣಗಳೇನು ಎಂಬುದನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದೆ. ಪ್ರಕರಣಕ್ಕೆ ಕಲುಷಿತ ನೀರು ಕಾರಣವೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನೀರಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಪ್ರಸ್ತುತ ಅಪಾರ್ಟ್‌ಮೆಂಟ್‌ನ ಪೋಷಕರು ತೀವ್ರ ಆತಂಕದಲ್ಲಿದ್ದು, ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆರೋಗ್ಯ ಇಲಾಖೆಯ ವರದಿ ಬಂದ ನಂತರವೇ ಈ ಸಾಮೂಹಿಕ ಅನಾರೋಗ್ಯದ ಮೂಲ ಕಾರಣ ಏನು ಎಂಬುದು ಸ್ಪಷ್ಟವಾಗಲಿದೆ.
ಇದನ್ನೂ ಓದಿ : ಲೈಂಗಿಕ ಸಮಸ್ಯೆ ಬಗೆಹರಿಸ್ತೀನಿ ಅಂತ ಟೆಕ್ಕಿಗೆ ವಂಚನೆ – ಆರೋಪಿ ವಿಜಯ್ ಗುರೂಜಿ ಅರೆಸ್ಟ್!







