ಬಿಜೆಪಿ vs ಪುತ್ತಿಲ ಪರಿವಾರ ಜಟಾಪಟಿ – ಜಿಲ್ಲಾ ಬಿಜೆಪಿ ಉಪಾಧ್ಯಕ್ಷರನ್ನೇ ಕಾರ್ಯಕ್ರಮದಿಂದ ಹೊರದಬ್ಬಿದ ಪು.ಪರಿವಾರ ಕಾರ್ಯಕರ್ತರು!

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಜಟಾಪಟಿ ಮುಂದುವರೆದಿದೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರಿಗೆ ಪುತ್ತಿಲ ಪರಿವಾರದ ಕಾರ್ಯಕರ್ತರು ಬಹಿರಂಗವಾಗಿ ಅವಮಾನ ಮಾಡಿದ್ದಾರೆ.

ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಪುತ್ತಿಲ ಪರಿವಾರದ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಗೇಟ್‌ನಿಂದಲೇ ಹೊರದಬ್ಬಿದ್ದಾರೆ. ಪ್ರಸನ್ನ ಕುಮಾರ್ ಅವರು ಶ್ರೀನಿವಾಸ ಕಲ್ಯಾಣೋತ್ಸವದ ಸ್ಥಾಪಕಾಧ್ಯಕ್ಷರೂ ಆಗಿದ್ದು, ಅವರು ಸ್ವತಃ ಪುತ್ತಿಲ ಪರಿವಾರದ ಪ್ರಮುಖರ ಆಮಂತ್ರಣದ ಮೇರೆಗೆ ಕುಟುಂಬ ಸಮೇತ ಆಗಮಿಸಿದ್ದರು. ಆದರೆ ಪುತ್ತಿಲ ಪರಿವಾರದ ಕಾರ್ಯಕರ್ತರು ಪ್ರಸನ್ನ ಕುಮಾರ್ ಮಾರ್ತ ಅವರನ್ನು ಕಾರ್ಯಕ್ರಮದಿಂದ ಹೊರದಬ್ಬಿದ್ದಾರೆ. ಇದರಿಂದ ತೀವ್ರ ನೋವಿಗೆ ಒಳಗಾದ ಪ್ರಸನ್ನ ಕುಮಾರ್ ಮಾರ್ತ ಅವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಡೆಯಲ್ಲಿ ಬಂದು ಕಣ್ಣೀರು ಹಾಕಿದ್ದಾರೆ.

ತಮಗೆ ಆದ ಅವಮಾನದಿಂದ ಮನನೊಂದ ಪ್ರಸನ್ನ ಕುಮಾರ್ ಮಾರ್ತ ಅವರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ತೆರಳಿ ಭಾವುಕರಾಗಿ ಪ್ರಾರ್ಥಿಸಿದರು. ಯಾರು ನನಗೆ ಅವಮಾನ ಮಾಡಿದ್ದಾರೋ ಅವರಿಗೆ ಶಿಕ್ಷೆ ನೀಡಬೇಡ, ಬದಲಾಗಿ ಬುದ್ಧಿ ಕೊಡು ಎಂದು ಪ್ರಸನ್ನ ಕುಮಾರ್ ಮಾರ್ತ ಅವರು ಪ್ರಾರ್ಥಿಸಿದ್ದಾರೆ. 

ಈ ಬಗ್ಗೆ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರು ಕಣ್ಣೀರು ಹಾಕುತ್ತಲೇ ಪ್ರತಿಕ್ರಿಯಿಸಿ, ಪುತ್ತಿಲ ಪರಿವಾರದಲ್ಲಿರುವಾಗಲೂ ನಾನು ಸಮಸ್ತ ಹಿಂದೂಗಳಿಗಾಗಿ ಕೆಲಸ ಮಾಡಿದ್ದೇನೆ. ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಸ್ಥಾನ ನೀಡಿದ ಮೇಲೂ ಹಿಂದೂ ಸಮಾಜವನ್ನು ಒಟ್ಟು ಗೂಡಿಸುವ ಪ್ರಯತ್ನ ಮಾಡಿದ್ದೇನೆ, ನಿನ್ನೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮಕ್ಕೆ ನನ್ನ ಮನೆಗೆ ಬಂದು ನನ್ನನ್ನ ಆಹ್ವಾನಿಸಿದ್ದರು. ಶ್ರೀನಿವಾಸ ಕಲ್ಯಾಣೋತ್ಸವದ ಪ್ರತಿಯೊಂದು ಕಾರ್ಯಕ್ರಮದಲ್ಲೂ ನಾನು ಸಕ್ರೀಯವಾಗಿ ಭಾಗವಹಿಸಿದ್ದೇನೆ, ಆದ್ರೆ ಇತ್ತೀಚೆಗೆ ನಡೆದಂತ ರಾಜಕೀಯ ವಿದ್ಯಾಮಾನದ ಬಳಿಕ ನನ್ನನ್ನ ಬಿಜೆಪಿಗೆ ರಾಜೀನಾಮೆ ನೀಡ್ಬೇಕು ಎಂದು ಪುತ್ತಿಲ ಪರಿವಾರದವ್ರು ಒತ್ತಡ ಹಾಕ್ತಾ ಇದ್ದಾರೆ. ಆದರೂ ನನ್ನನ್ನ ಪುತ್ತಿಲ ಪರಿವಾರದ ಪ್ರಮುಖರು ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದರು, ಅದರಂತೆ ನಿನ್ನೆ ನಾನು ಕುಟುಂಬ ಸಮೇತ ಹೋಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆದ್ರೆ ನಾನು ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಗೇಟ್​ನಲ್ಲೇ ಹೊರದಬ್ಬುವಂತ ಕೆಲಸ ಮಾಡಿದ್ದಾರೆ ಎಂದಿದ್ದಾರೆ.

ಈ ವಿದ್ಯಾಮಾನದಿಂದ ಕೊರಗಿ ನನ್ನ ಪತ್ನಿ ಮಹಾಲಿಂಗೇಶ್ವರ ದೇವರ ಮಣ್ಣಿನಲ್ಲಿ ಕಣ್ಣಿರು ಹಾಕಿದ್ದಾಳೆ, ಪುತ್ತಿಲ ಪರಿವಾರದ ಕಾರ್ಯಕರ್ತರ ನಡೆಯಿಂದ ತುಂಬಾ ಬೇಸರಗೊಂಡಿದ್ದೇನೆ. ಪುತ್ತಿಲ ಪರಿವಾರದವ್ರು ನನಗೆ ಮಾಡಿದ ಅವಮಾನ ಮಹಾಲಿಂಗೇಶ್ವರ ದೇವರಿಗೆ ಗೊತ್ತಿದೆ. ನನಗೆ ಅವಮಾನ ಮಾಡಿದಂತ ವ್ಯಕ್ತಿಗೆ ಸಂಸಾರ ಇರುವ ಕಾರಣ ಆತನಿಗೆ ಶಿಕ್ಷೆ ಬೇಡ, ಬದಲಿಗೆ ಬುದ್ಧಿಕೊಡಿ ಎಂದು ಕೇಳಿಕೊಂಡಿದ್ದೇನೆ. ಯಾರದ್ದೋ ಪ್ರೇರಣೆಗೊಳಗಾಗಿ ಈ ರೀತಿ ವರ್ತನೆ ಮಾಡಿದ್ದಾನೆ, ಇದನ್ನು ಯಾರು ಮಾಡಿಸಿದ್ದಾರೋ ಅವರಿಗೂ ಬುದ್ಧಿ ಕೊಡಲಿ. ನಿನ್ನೆಯ ಕಾರ್ಯಕ್ರಮದಲ್ಲಿ ನನ್ನ ಒಬ್ಬನ ಮೇಲೆ ಅವಮಾನ ಮಾಡಿದ್ದಾರೆ, ಬಿಜೆಪಿ ಪಕ್ಷದ ಜವಾಬ್ದಾರಿ ಇರುವವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದ್ರೆ ನನ್ನನ್ನು ಒಬ್ಬನನ್ನೇ ಅವಮಾನ ಮಾಡಿದ್ದಾರೆ, ಈ ಎಲ್ಲಾವನ್ನು ಮಹಾಲಿಂಗೇಶ್ವರ ದೇವರು ತೀರ್ಮಾನ ಮಾಡುತ್ತಾನೆ. ನನ್ನ ರಾಜೀನಾಮೆಗೆ ಒತ್ತಾಯಿಸಿದ ವ್ಯಕ್ತಿಯ ಹೆಸರನ್ನು ಮುಂದಿನ ದಿನಗಳಲ್ಲಿ ಹೇಳುತ್ತೇನೆ, ನಿನ್ನೆ ನಡೆದ ಘಟನೆಯ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನನಗೆ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಪ್ರಮುಖರು ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ ಎಂದು ಪ್ರಸನ್ನ ಕುಮಾರ್ ಮಾರ್ತ ಹೇಳಿದರು.

ಇದನ್ನೂ ಓದಿ : ಉಡುಪಿಯಲ್ಲಿ ಟೆಂಪೋ ಪಲ್ಟಿ – ಐವರು ಕಾರ್ಮಿಕರು ದುರ್ಮರಣ!

Btv Kannada
Author: Btv Kannada

Read More