ನವದೆಹಲಿ : ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಡಿ.19ರಂದು ಕೊನೆಗೊಳ್ಳಲಿದೆ. ಈ ಅಧಿವೇಶನದಲ್ಲಿ ಇತ್ತೀಚೆಗೆ ನಡೆದ ದೆಹಲಿ ಸ್ಫೋಟ ಸದ್ದು ಮಾಡಲಿದೆ. ಕೇಂದ್ರ ಸರ್ಕಾರದ ರಾಷ್ಟ್ರೀಯ ಭದ್ರತಾ ವೈಫಲ್ಯದ ಕುರಿತು ವಿರೋಧ ಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆ ಇದೆ.
ರಾಷ್ಟ್ರೀಯ ಭದ್ರತೆಯ ಕುರಿತು ಸಮಗ್ರ ಚರ್ಚೆಗೆ ವಿರೋಧ ಪಕ್ಷಗಳು ಸರ್ಕಾರಕ್ಕೆ ಒತ್ತಡ ಹೇರಲಿವೆ. ಮತದಾರರ ಪಟ್ಟಿ ಪರಿಷ್ಕರಣೆ ಮತ್ತು SIR ಪ್ರಕ್ರಿಯೆ ಕುರಿತು ವಿಪಕ್ಷಗಳು ಪ್ರಶ್ನಿಸಲಿವೆ. ವಿರೋಧ ಪಕ್ಷಗಳ ಆರೋಪಗಳಿಗೆ ಮತ್ತು ಪ್ರಶ್ನೆಗಳಿಗೆ ಕೌಂಟರ್ ಕೊಡಲು ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ ಸಜ್ಜಾಗಿದೆ.
ಈ 19 ದಿನಗಳ ಅವಧಿಯಲ್ಲಿ ಒಟ್ಟು 15 ಕಲಾಪಗಳು ನಡೆಯಲಿವೆ. ಡಿಸೆಂಬರ್ 5 ಮತ್ತು 19 ರಂದು ಖಾಸಗಿ ಸದಸ್ಯರ ಮಸೂದೆಗಳನ್ನ ಮತ್ತು ಡಿಸೆಂಬರ್ 12 ರಂದು ಖಾಸಗಿ ಸದಸ್ಯರ ನಿರ್ಣಯಗಳನ್ನ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಬಾರಿಯ ಅಧಿವೇಶನದಲ್ಲಿ ಪ್ರಮುಖ ಶಾಸಕಾಂಗ ಮತ್ತು ಹಣಕಾಸು ವ್ಯವಹಾರಗಳನ್ನು ಕೈಗೆತ್ತಿಕೊಳ್ಳಲು ನಿನ್ನೆ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಅಧಿವೇಶನದ ಹಿನ್ನೆಲೆಯಲ್ಲಿ ನಿನ್ನೆ ಆಡಳಿತರೂಢ ಎನ್‌ಡಿಎ ಸರ್ಕಾರ ಸರ್ವಪಕ್ಷಗಳ ಸಭೆ ನಡೆಸಿ ಸುಗಮ ಕಲಾಪಕ್ಕೆ ಮನವಿ ಮಾಡಿತು.
ಕಾಂಗ್ರೆಸ್ ಪಕ್ಷವು ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳು, ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR), ಮತ್ತು ಚೀನಾದೊಂದಿಗಿನ ವ್ಯಾಪಾರ ಒಪ್ಪಂದಗಳು ಹಾಗೂ ಸಮಸ್ಯೆಗಳ ಕುರಿತು ಚರ್ಚೆಗೆ ಒತ್ತಾಯಿಸುವ ಸಾಧ್ಯತೆಯಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಫುಡ್ ಆಫೀಸರ್ಸ್ ರೇಡ್ – ಅನ್ನಭಾಗ್ಯ ಯೋಜನೆಯ 50 ಕೆಜಿ ಅಕ್ಕಿ ವಶಕ್ಕೆ!







